ಬೆಂಗಳೂರು: ನಮಗೆ ನ್ಯಾಯ ನಿರಾಕರಣೆಯಾಗಿದೆ. ನ್ಯಾಯಕ್ಕಾಗಿ ಧ್ವನಿ ಎತ್ತಿ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ಪೋಸ್ಟರ್ ಗಳನ್ನು ರಸ್ತೆ ಬದಿಯ ಗೋಡೆಗಳಿಗೆ ಅಂಟಿಸಿರುವುದು ಕೋರ್ಟ್ ತೀರ್ಪಿಗೆ ಅಸಮ್ಮತಿಯೇ ಹೊರತು ದ್ವೇಷ ಅಥವಾ ಸೌಹಾರ್ದತೆ ಹಾಳು ಮಾಡುವ ಪ್ರಯತ್ನವಲ್ಲ. ದೇಶದ್ರೋಹ ಮತ್ತು ಅಶಾಂತಿ ಉಂಟು ಮಾಡಿದಂತೆಯೂ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಸ್ವಯಂಪ್ರೇರಿತ ಎಫ್ಐಅರ್ ರದ್ದುಪಡಿಸಲು ಕೋರಿ ಮಂಗಳೂರಿನ ಮೊಹಮದ್ ಹನೀಫ್ ಸೇರಿದಂತೆ ಒಟ್ಟು 13 ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ‘ಸಂವಿಧಾನ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಅನ್ಯಾಯವಾಗಿದೆ ಎಂಬ ಒಕ್ಕಣೆಯ ಪೋಸ್ಟರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ದ್ವೇಷ ಪ್ರಚೋದಿಸುವ ಅಪರಾಧ ಎಂದೆನಿಸುವುದಿಲ್ಲ ಎಂದು ತಿಳಿಸಿ ಪ್ರಕರಣವನ್ನ ರದ್ದುಗೊಳಿಸಿದೆ.
ಅಂಟಿಸಿದ್ದ ‘ಪೋಸ್ಟರ್ ನಲ್ಲಿದ್ದ ಪದಗಳು ಸಂವಿಧಾನದ 19 ಮತ್ತು 21ನೇ ವಿಧಿಗಳ ಚೌಕಟ್ಟಿನಲ್ಲೇ ಇವೆ. ಯಾರೋ ಕೆಲವರು ಕೋಪಗೊಳ್ಳಬಹುದು ಎಂಬ ಕಾರಣಕ್ಕೆ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 153ಎ ಅಥವಾ 295ಎ ಅನ್ವಯಿಸಲು ಸಾಧ್ಯವಿಲ್ಲ. ಸಾರ್ವಜನಿಕ ಹೇಳಿಕೆ ಅಥವಾ ಪೋಸ್ಟರ್ ಗಳ ಪ್ರಭಾವವನ್ನು ಸಮಾಜದ ಸಾಮಾನ್ಯ ಮತ್ತು ವಿವೇಕಯುತ ಜನರ ದೃಷ್ಟಿಕೋನದಿಂದ ನೋಡಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಏನಿದು ಪ್ರಕರಣ:
2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪೊಂದನ್ನು ವಿರೋಧಿಸಿ ಮಂಗಳೂರಿನ ರಸ್ತೆ ಬದಿಯ ಗೋಡೆಗಳ ಮೇಲೆ ನ್ಯಾಯದ ನಿರಾಕರಣೆ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಿ ಎಂದು ಕರೆ ನೀಡುವ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು.
ಈ ಸಂಬಂಧ ಮಂಗಳೂರು ದಕ್ಷಿಣ ಪಾಂಡೇಶ್ವರ ಠಾಣೆ ಪೊಲೀಸರು ಮೊಹಮದ್ ಹನೀಫ್ ಸೇರಿದಂತೆ ಒಟ್ಟು 13 ಜನರ ವಿರುದ್ಧ ಐಪಿಸಿ ಕಲಂ 153ಎ (ಗುಂಪುಗಳ ನಡುವೆ ವೈರತ್ವ ಪ್ರಚೋದನೆ), 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ), 120 ಬಿ (ಅಪರಾಧಿಕ ಸಂಚು) ಹಾಗೂ ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪ ತಡೆ ಕಾಯ್ದೆ-1981ರ ಅಡಿ ಸ್ವಯಂಪ್ರೇರಿತ ಎಫ್ ಐಆರ್ ದಾಖಲಿಸಿದ್ದರು. ಪ್ರಕರಣವನ್ನ ರದ್ದುಗೊಳಿಸುವಂತೆ ಕೋರಿ ಮೊಹಮದ್ ಹನೀಫ್ ಸೇರಿದಂತೆ ಒಟ್ಟು 13 ಜನರ ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
