ಅಸಂಜ್ಞೆಯ ಅಪರಾಧ ಕೃತ್ಯದ ತನಿಖೆಗೆ ಮ್ಯಾಜಿಸ್ಪ್ರೇಟ್ ಅನುಮತಿ ಕಡ್ಡಾಯ: ಹೈಕೋರ್ಟ್
ಬೆಂಗಳೂರು: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 174(2)ರ ಪ್ರಕಾರ ಗಂಭೀರ ಸ್ವರೂಪವಲ್ಲದ ಅಪರಾಧ (ಅಸಂಜ್ಞೆಯ-ಎನ್ಸಿಆರ್) ಕೃತ್ಯದ ಕುರಿತು ತನಿಖೆ ನಡೆಸಲು ಪೊಲೀಸರು ಮ್ಯಾಜಿಸ್ಪ್ರೇಟ್ ನ್ಯಾಯಾಲಯದ ಅನುಮತಿ ಪಡೆಯುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು ಅಸಂಜ್ಞೆಯ ಅಪರಾಧ ಕೃತ್ಯದ ತನಿಖೆ ನಡೆಸಲು ಪೊಲೀಸರು ಮ್ಯಾಜಿಸ್ಪ್ರೇಟ್ ನ್ಯಾಯಾಲಯದ ಪೂರ್ವಾನುಮತಿ ಪಡೆಉಬೇಕು. ದೂರನ್ನು ಕೇವಲ ಮ್ಯಾಜಿಸ್ಪ್ರೇಟ್ ಗೆ ರವಾನಿಸಿ, ಅದು ತಲುಪಿದ ಬಗ್ಗೆ ಸ್ವೀಕೃತಿ ಪಡೆದುಕೊಳ್ಳುವುದು ಬಿಎನ್ಎಸ್ಎಸ್ ಸೆಕ್ಷನ್ 174(2) ಪಾಲಿಸಿದಂತಾಗುವುದಿಲ್ಲಎಂದು ತಿಳಿಸಿದೆ.
ಮ್ಯಾಜಿಸ್ಪ್ರೇಟ್ ನ್ಯಾಯಾಲಯದ ಅನುಮತಿ ಪಡೆಯದೆ ವಂಚನೆ ಅಪರಾಧ (ಅಸಂಜ್ಞೆಯ ಅಪರಾಧ ಕೃತ್ಯ) ಸಂಬಂಧ ತಮ್ಮ ವಿರುದ್ಧ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಮಾಡುವಂತೆ ಕೋರಿ ಅಖಿಲ್ ಅಚ್ಯುತ್ ಸೇರಿ ಮೂವರು ಆರೋಪಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ, ”ಅರ್ಜಿದಾರರ ವಿರುದ್ಧ ಬಿಎನ್ಎಸ್ ಸೆಕ್ಷನ್ 318(4) ಅಡಿಯಲ್ಲಿ ವಂಚನೆ ಮಾಡುವ ಹಾಗೂ ಅಪ್ರಾಮಾಣಿಕವಾಗಿ ಆಸ್ತಿಯನ್ನು ಹಸ್ತಾಂತರಿಸುವಂತೆ ಪ್ರೇರೇಪಿಸುವ ಕೃತ್ಯಗಳಿಗೆ ಸಂಬಂಧಿಸಿದ ದೂರಿನ ಕುರಿತಂತೆ ಪೊಲೀಸರು 2024ರ ರಾತ್ರಿ 7.30ಕ್ಕೆ ಎಫ್ ಐಆರ್ ದಾಖಲಿಸಿದ್ದಾರೆ. ನಂತರ ರಾತ್ರಿ 8.05 ಗಂಟೆಗೆ ಆ ದೂರನ್ನು ಪೊಲೀಸರು ಮ್ಯಾಜಿಸ್ಪ್ರೇಟ್ ಕೋರ್ಟ್ ಗೆ ರವಾನಿಸಿದ್ದಾರೆ. ತನಿಖೆ ಮಾಡಲು ಪೊಲೀಸರಿಗೆ ಅಧಿಕಾರ ಕಲ್ಪಿಸಿ ಮ್ಯಾಜಿಸ್ಪ್ರೇಟ್ ಕೋರ್ಟ್ ಯಾವುದೇ ಆದೇಶ ಮಾಡಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧ ಅಸಂಜ್ಞೆಯ ಅಪರಾಧ ಕೃತ್ಯ ಕುರಿತು ತನಿಖೆ ಮಾಡಲು ಪೊಲೀಸರಿಗೆ ಅನುಮತಿ ನೀಡುವಂತಹ ಯಾವುದೇ ಪೂರ್ವಾನುಮತಿಯಾಗಲಿ ಅಥವಾ ತದನಂತರದ ಆದೇಶವಾಗಲಿ ಸಂಬಂಧಪಟ್ಟ ಮ್ಯಾಜಿಸ್ಪ್ರೇಟ್ ಅವರಿಂದ ದೊರೆತಿರಲಿಲ್ಲ,” ಎಂದು ಅಭಿಪ್ರಾಯಪಟ್ಟಿತು.
”ಬಿಎನ್ಎಸ್ಎಸ್ ಸೆಕ್ಷನ್ 174(2)ರ ಪ್ರಕಾರ ಅಸಂಜ್ಞೆಯ ಅಪರಾಧ ಕೃತ್ಯದ ತನಿಖೆಗೆ ಮ್ಯಾಜಿಸ್ಪ್ರೇಟ್ ನ್ಯಾಯಾಲಯವು ಪೊಲೀಸರಿಗೆ ಪೂರ್ವಾನುಮತಿ ನೀಡಬೇಕು. ಅಂತಹ ಪೂರ್ವಾನುಮತಿಯಿಲ್ಲದೆ ಅಸಂಜ್ಞೆಯ ಅಪರಾಧ ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುವಂತಿಲ್ಲ. ದೂರನ್ನು ಕೇವಲ ಮ್ಯಾಜಿಸ್ಪ್ರೇಟ್ಗೆ ರವಾನಿಸಿ, ಅದು ತಲುಪಿದ ಬಗ್ಗೆ ಸ್ವೀಕೃತಿ ಪಡೆದುಕೊಳ್ಳುವುದು, ಬಿಎನ್ಎಸ್ಎಸ್ ಸೆಕ್ಷನ್ 174(2) ಅನುಸರಣೆಯಾಗುವುದಿಲ್ಲ. ಪ್ರಕರಣದಲ್ಲಿ ಬಿಎನ್ಎಸ್ಎಸ್ 174ರ ಅಡಿಯಲ್ಲಿ ನಿಗದಿತ ನಿಯಮ/ಪ್ರಕ್ರಿಯೆ ಅನುಸರಿಸದೆ ಎಫ್ ಐಆರ್ ದಾಖಲಿಸಿರುವುದಕ್ಕೆ ಕಾನೂನಿನ ಸಿಂಧುತ್ವ ಇಲ್ಲವಾಗಿದೆ. ಪ್ರಕರಣದ ತನಿಖೆ ಮುಂದುವರಿಕೆಗೆ ಅನುಮತಿಸುವುದು ಸರಕಾರದ ಸ್ಪಷ್ಟ ಶಾಸನಬದ್ಧ ಅವಶ್ಯಕತೆ ಪೂರೈಸುವುದನ್ನು ತಪ್ಪಿಸಲು ಪೊಲೀಸರಿಗೆ ಅವಕಾಶ ನೀಡಿದಂತಾಗುತ್ತದೆ. ಇದರಿಂದ ಅರ್ಜಿದಾರರ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆ ರದ್ದು ಮಾಡಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿತು.
ಹಾಗೆಯೇ ಪೊಲೀಸರು ಸಂಬಂಧಪಟ್ಟ ಮ್ಯಾಜಿಸ್ಪ್ರೇಟ್ ಕೋರ್ಟ್ ಗೆ ಹೋಗಿ ತನಿಖೆಗೆ ಅನುಮತಿ ಕೋರುವುದಕ್ಕೆ ಈ ಆದೇಶ ಅಡ್ಡಿಪಡಿಸುವುದಿಲ್ಲ. ಮ್ಯಾಜಿಸ್ಪ್ರೇಟ್ ಕೋರ್ಟ್ ಒಂದು ವೇಳೆ ಅನುಮತಿ ನೀಡಿ ಆದೇಶಿಸಿದರೆ, ಕಾನೂನು ಪ್ರಕಾರ ಮುಂದುವರಿಯಲು ಪೊಲೀಸರು ಸ್ವತಂತ್ರರಿರುತ್ತಾರೆ ಎಂದು ನ್ಯಾಯಪೀಠ ತಿಳಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
