20/11/2026

Law Guide Kannada

Online Guide

ವ್ಯಕ್ತಿಯ ಪೌರತ್ವ ನಿರ್ಧರಿಸುವ ಅಧಿಕಾರ ಎಫ್ ಆರ್ ಆರ್ ಒಗೆ ಇಲ್ಲ- ಹೈಕೋರ್ಟ್

ಬೆಂಗಳೂರು: ದೇಶದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬನ ಬಳಿಯಿರುವ ದಾಖಲೆಗಳನ್ನು ಪರಿಶೀಲಿಸಿ ಆತ ವಿದೇಶಿ ಪ್ರಜೆ ಎಂಬುದನ್ನು ಸಾಬೀತುಪಡಿಸುವ ಅಧಿಕಾರ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ)ಗೆ ಇಲ್ಲ. ಹಾಗೆಯೇ ಪೌರತ್ವದ ಕುರಿತು ಕಾನೂನುಬದ್ಧ ಮತ್ತು ನ್ಯಾಯಸಮ್ಮತವಾಗಿ ವಿಚಾರಣೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಆತನನ್ನು ದೇಶದಿಂದ ಗಡಿಪಾರು ಮಾಡುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಅಕ್ರಮ ಬಾಂಗ್ಲಾದೇಶಿ ವಲಸಿಗನೆಂಬ ಶಂಕೆಯ ಮೇರೆಗೆ ಬಂಧನಕ್ಕೊಳಗಾಗಿ ಕೊತ್ತನೂರಿನ ಯುಟೈಲ್ ಫೌಂಡೇಷನ್ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿರುವ ಅಬ್ದುಲ್ ರಹೀಂ ಮತ್ತು ಆತನ ಸಂಬಂಧಿ ಜಾಹಿದುಲ್ ಇಸ್ಲಾಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

2025ರ ವಿದೇಶಿಯರ ಆದೇಶದ ಪ್ಯಾರಾ 16ರ ಪ್ರಕಾರ, ವ್ಯಕ್ತಿಯೊಬ್ಬ ವಿದೇಶಿಯನೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರ ‘ವಿದೇಶಿಯರ ನ್ಯಾಯಮಂಡಳಿಗೆ’ ಇದೆಯೇ ಹೊರತು ಎಫ್ಆರ್ಆರ್ಒ ಅಧಿಕಾರಿಗಳಿಗಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ವಿದೇಶಿಯರಿಗೂ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿ ಭಾರತೀಯ ಪೌರತ್ವದ ದಾಖಲೆಗಳನ್ನು ಹಾಜರುಪಡಿಸಿದಾಗ, ಅವುಗಳನ್ನು ಪರಿಶೀಲಿಸಿ ಆತನಿಗೆ ತನ್ನ ವಾದ ಮಂಡಿಸಲು ಸೂಕ್ತ ಅವಕಾಶ ನೀಡದೆ ಏಕಾಏಕಿ ವಿದೇಶಿ ಪ್ರಜೆ ಎಂದು ತೀರ್ಮಾನಿಸುವುದು ಸರಿಯಾದ ಕ್ರಮವಲ್ಲ. ಅರ್ಜಿದಾರರು ಸಲ್ಲಿಸಿರುವ ದಾಖಲೆಗಳ ಸತ್ಯಾಸತ್ಯತೆಯ ಕುರಿತು ಎಫ್ಆರ್ಆರ್ಒ ಅಧಿಕಾರಿಗಳು ಅರ್ಜಿ ಸಲ್ಲಿಕೆಯಾದ ನಂತರ ತನಿಖೆ ನಡೆಸಿದ್ದಾರೆ. ಆದರೆ ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಪೌರತ್ವದ ಪ್ರಶ್ನೆ ಇತ್ಯರ್ಥವಾಗದೆ ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ವಿವರ
ಬೆಂಗಳೂರಿನ ಕೂಡ್ಲು ಗ್ರಾಮದಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ ರಹೀಂ ಅವರನ್ನು ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಕಾರ್ಯಾಚರಣೆ ವೇಳೆ ಬಂಧಿಸಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಸೂಚನೆಯ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಅಧಿಕಾರಿಗಳು ಅರ್ಜಿದಾರರನ್ನು 2026ರ ಮಾರ್ಚ್ 5ರಂದು ಬಂಧಿಸಿದ್ದರು. ಬಳಿಕ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ)ಗೆ ಹಸ್ತಾಂತರಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು, ತಮ್ಮ ಬಳಿಯಿರುವ ಭಾರತ ದೇಶದ ಪ್ರಜೆ ಎನ್ನುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ, ತಾನೂ ಭಾರತೀಯ ಪ್ರಜೆ ಎಂದು ಸಾಬೀತುಪಡಿಸಿದ್ದರು.

ಆದರೆ, ಎಫ್ಆರ್ಆರ್ಒ ಅಧಿಕಾರಿಗಳು ಅಂದೇ ‘ಚಲನವಲನ ನಿರ್ಬಂಧ ಆದೇಶ’ ಹೊರಡಿಸಿ, ಗಡಿಪಾರು ಮಾಡುವವರೆಗೆ ಕೊತ್ತನೂರಿನ ಯುಟಿಲ್ ಫೌಂಡೇಶನ್ನಿಂದ ಹೊರಹೋಗದಂತೆ ನಿರ್ಬಂಧ ಹೇರಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಕ್ಲಿಫ್ಟನ್ ಡಿ ರೊಜಾರಿಯೋ, ನಮ್ಮ ಕಕ್ಷಿದಾರರು 1979ರಲ್ಲಿ ದೆಹಲಿಯಲ್ಲಿ ಜನಿಸಿದ್ದು, ಹುಟ್ಟಿನಿಂದಲೇ ಭಾರತೀಯ ಪ್ರಜೆ. ತನ್ನ ಬಳಿ ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ಹಾಗೂ ಉದ್ಯಮ್ ನೋಂದಣಿ ಸೇರಿದಂತೆ ಎಲ್ಲಾ ಅಧಿಕೃತ ದಾಖಲೆಗಳಿವೆ. ದಾಖಲೆಗಳನ್ನು ಪರಿಶೀಲಿಸದೆ ಏಕಪಕ್ಷೀಯವಾಗಿ ವಿದೇಶಿ ಪ್ರಜೆ ಎಂದು ನಿರ್ಧರಿಸಿ ಬಂಧಿಸಲಾಗಿದೆ ಎಂದು ಎಂದು ಪೀಠಕ್ಕೆ ತಿಳಿಸಿದ್ದರು.

ಅರ್ಜಿದಾರರ ದಾಖಲೆಗಳು ಮತ್ತು ಪೌರತ್ವದ ಕುರಿತು ಸಂಬಂಧಪಟ್ಟ ಪ್ರಾಧಿಕಾರಗಳು ಕಾನೂನು ಪ್ರಕಾರ ಅರ್ಜಿದಾರರಿಗೆ ಸೂಕ್ತ ಅವಕಾಶ ನೀಡಿ ಶೀಘ್ರವಾಗಿ ಮುಂದಿನ ಕ್ರಮ ಕೈಗೊಳ್ಳಬೇಕು. ಆ ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ನಿರ್ಧಾರ ಆಗುವವರೆಗೆ ಅರ್ಜಿದಾರರನ್ನು ದೇಶದಿಂದ ಗಡಿಪಾರು ಮಾಡಬಾರದು ಎಂದು ಹೈಕೋರ್ಟ್ ನ್ಯಾಯಪೀಠ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.