23/04/2026

Law Guide Kannada

Online Guide

ಪದೋನ್ನತಿ ನಿರಾಕರಿಸಿದ್ರೆ ಉದ್ಯೋಗಿಗೆ ವರ್ಷದೊಳಗೆ ಮರುಪರಿಶೀಲನೆ ಕೇಳುವ ಹಕ್ಕಿಲ್ಲ- ಹೈಕೋರ್ಟ್

ಶಿಮ್ಲಾ: ಉನ್ನತ ಹುದ್ದೆಗೆ ಪದೋನ್ನತಿ ನೀಡಿದ್ದನ್ನು ನಿರಾಕರಿಸುವ ಉದ್ಯೋಗಿಗೆ ಒಂದು ವರ್ಷದೊಳಗೆ ಮರುಪರಿಶೀಲನೆ ಕೇಳುವ ಹಕ್ಕಿಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ರಂಜನ್ ಶರ್ಮಾ ಅವರಿದ್ದ ಪೀಠವು ಈ ತೀರ್ಪು ಪ್ರಕಟಿಸಿದೆ. ಭಾಷೆ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಿರಿಯ ಸಹಾಯಕ (Senior Assistant) ಹುದ್ದೆಗೆ ತನ್ನ ಕಿರಿಯರ ನಿಯೋಜನೆ ಹಾಗೂ ಪದೋನ್ನತಿಯನ್ನು ಪ್ರಶ್ನಿಸಿ, ನಿವೃತ್ತ ಜೂನಿಯರ್ ಸಹಾಯಕಿಯಾದ ಇಂದು ಶರ್ಮಾ ರಿಟ್ ಸಲ್ಲಿಸಿದ್ದರು, ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠವು, “ಒಬ್ಬ ಉದ್ಯೋಗಿಗೆ ಉನ್ನತ ಹುದ್ದೆಗೆ ಪದೋನ್ನತಿ ನೀಡಲಾಗಿದ್ದು, ಆ ಉದ್ಯೋಗಿ ಅದನ್ನು ನಿರಾಕರಿಸಿದರೆ ಅಥವಾ ತ್ಯಜಿಸಿದರೆ, ಮೊದಲ ಪದೋನ್ನತಿಯನ್ನು ನಿರಾಕರಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ ಅಥವಾ ಮುಂದಿನ ಖಾಲಿ ಹುದ್ದೆ ಉಂಟಾಗುವವರೆಗೆ (ಎರಡರಲ್ಲಿ ಯಾವುದು ನಂತರವಾಗುತ್ತದೋ ಅದುವರೆಗೆ), ಆ ಉದ್ಯೋಗಿಯನ್ನು ಮತ್ತೆ ಪದೋನ್ನತಿಗಾಗಿ ಪರಿಗಣಿಸಬಾರದು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ದಿನಾಂಕ 278.2004ರ ಸರ್ಕಾರದ ಸೂಚನೆಗಳ ಹಿನ್ನೆಲೆಯಲ್ಲಿ, ಒಮ್ಮೆ ಉದ್ಯೋಗಿ ಪದೋನ್ನತಿಯನ್ನು ತ್ಯಜಿಸಿದರೆ, ಒಂದು ವರ್ಷದೊಳಗೆ ಮರುಪರಿಶೀಲನೆ ಕೋರಲು ಅವರಿಗೆ ಹಕ್ಕಿಲ್ಲ ಎಂದು ತೀರ್ಪು ನೀಡಿತು.

1985ರಲ್ಲಿ ಅರ್ಜಿದಾರರು ಸೇವೆಗೆ ಸೇರಿದ್ದರು. 1995ರಲ್ಲಿ ಜೂನಿಯರ್ ಸಹಾಯಕಿಯಾಗಿ ಪದೋನ್ನತಿ ಪಡೆದು ನಂತರ 2001ರಲ್ಲಿ ಹಿರಿಯ ಸಹಾಯಕಿಯಾಗಿ ಪದೋನ್ನತಿ ನೀಡಲಾದರೂ, ಅವರು ಆ ಹುದ್ದೆಗೆ ಸೇರ್ಪಡೆಯಾಗದೆ ಅದನ್ನು ನಿರಾಕರಿಸಿದರು.

ಇದಾದ ಬಳಿಕ ಮತ್ತೆ ಜೂನ್ 2004ರಲ್ಲಿ ಹಿರಿಯ ಸಹಾಯಕಿಯಾಗಿ ಅವರಿಗೆ ಪದೋನ್ನತಿ ನೀಡಲಾಗಿದ್ದು ಅದನ್ನೂ ಸಹ ಅವರು ನಿರಾಕರಿಸಿದ್ದರು. ನಂತರ ಇತರ ಅಭ್ಯರ್ಥಿಗಳಿಗೆ ಹಿರಿಯ ಸಹಾಯಕ ಹುದ್ದೆಗೆ ನಿಯೋಜನೆ (placement) ನೀಡಲಾಯಿತು. ತಮ್ಮನ್ನು ಪರಿಗಣಿಸದೆ ಇರುವುದರಿಂದ ಅಸಮಾಧಾನಗೊಂಡ ಅರ್ಜಿದಾರರು, ಇತರ ಅಭ್ಯರ್ಥಿಗಳ ಪದೋನ್ನತಿ ಹಾಗೂ ನಿಯೋಜನೆಯನ್ನು ಪ್ರಶ್ನಿಸಿ ಮರುಪರಿಶೀಲನೆ ಮಾಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯವು, ಇತರ ಅಭ್ಯರ್ಥಿಗೆ ಪದೋನ್ನತಿ ನೀಡಲಾಗಿಲ್ಲ, ಕೇವಲ ಹಿರಿಯ ಸಹಾಯಕಿಯಾಗಿ ನಿಯೋಜನೆ ನೀಡಲಾಗಿದೆ ಎಂದು ಗಮನಿಸಿ, ಈ ಅಂಶದಲ್ಲಿ ಅರ್ಜಿದಾರರ ಆಕ್ಷೇಪಣೆ ತಪ್ಪು ಕಲ್ಪನೆಯ ಮೇರೆಗೆ ಇದೆ ಎಂದು ಹೇಳಿತು.

ಇದಲ್ಲದೆ, ಅರ್ಜಿದಾರರು ಸಂಬಂಧಿತ ಸರ್ಕಾರದ ಸೂಚನೆಗಳನ್ನು ಪ್ರಶ್ನಿಸಿಲ್ಲ ಮತ್ತು ಸೂಚನೆಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿ ನೀಡಲಾದ ತಮ್ಮ ಮನವಿಯ ತಿರಸ್ಕಾರದ ಆದೇಶವನ್ನೂ ಪ್ರಶ್ನಿಸಿಲ್ಲ ಎಂದು ಕಂಡುಕೊಂಡ ನ್ಯಾಯಪೀಠವು, ಅರ್ಜಿದಾರರಿಗೆ ಹಿರಿಯ ಸಹಾಯಕ ಹುದ್ದೆಗೆ ಪರಿಗಣನೆ ಹಾಗೂ ಪದೋನ್ನತಿ ನಿರಾಕರಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.