ಲೈಸನ್ಸ್ ರಹಿತ ಅಪಘಾತಕ್ಕೆ ವಿಮಾ ಕಂಪೆನಿ ಹೊಣೆಗಾರರಲ್ಲ- ಶಾಲೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ತನ್ನ ಉದ್ಯೋಗಿ ಚಾಲಕರ ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸನ್ಸ್) ಮಾಡಿಸಿಕೊಳ್ಳುವುದು ಮತ್ತು ಅದನ್ನು ಪರಿಶೀಲಿಸುವುದು ಉದ್ಯೋಗದಾತನ ಕರ್ತವ್ಯವಾಗಿದೆ. ಹೀಗಾಗಿ ಲೈಸನ್ಸ್ ರಹಿತ ಚಾಲಕ ಮಾಡಿದ ಅಪಘಾತಕ್ಕೆ ವಿಮಾ ಕಂಪೆನಿಯನ್ನು ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಅಪಘಾತಕ್ಕೀಡಾಗಿ ಮೃತಪಟ್ಟ ಚಾಲಕನ ಕುಟುಂಬಕ್ಕೆ 5.38 ಲಕ್ಷ ರೂ. ಪರಿಹಾರ ಪಾವತಿಸುವಂತೆ ಕಾರ್ಮಿಕ ಪರಿಹಾರ ಆಯುಕ್ತರು ನೀಡಿದ್ದ ಆದೇಶ ಪ್ರಶ್ನಿಸಿ ಮಂಗಳೂರು ತಾಲೂಕಿನ ತೆಂಕುಳಿಪಾಡಿಯ ಬಾಲ್ಕಿ ಪ್ರೈಮರಿ ಶಾಲೆಯು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿ ವಜಾಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ. ಮನ್ಮಥ ರಾವ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಚಾಲಕರ ಪರವಾನಗಿ ಪರಿಶೀಲನೆ ಉದ್ಯೋಗದಾತರ ಕರ್ತವ್ಯ. ಇಲ್ಲವಾದರೆ ಅದು ವಿಮಾ ಪಾಲಿಸಿಯ ಷರತ್ತಿನ ಉಲ್ಲಂಘನೆಯಾಗುತ್ತದೆ ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಆದ್ದರಿಂದ ಈ ಪ್ರಕರಣದಲ್ಲಿ ವಿಮಾ ಕಂಪನಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿತು.
ಚಾಲಕರು ಚಾಲನಾ ಪರವಾನಗಿ ಹೊಂದಿರುವುದನ್ನು ವಾಹನ ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅಪಘಾತದ ವೇಳೆ ಚಾಲಕನ ಬಳಿ ಚಾಲ್ತಿಯಲ್ಲಿರುವ ಪರವಾನಗಿ ಇಲ್ಲದಿದ್ದರೆ, ವಿಮಾ ಕಂಪನಿಗಳು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು.
ಏನಿದು ಪ್ರಕರಣ…
2008ರ ಅಗಸ್ಟ್ 14ರಲ್ಲಿ ಬಾಲ್ಕಿ ಶಾಲೆಯ ಬಸ್ ಚಾಲಕ ಬದ್ರುದ್ದೀನ್ ಉಳಾಯಿಬೆಟ್ಟು ಗ್ರಾಮದಿಂದ ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಭಾರಿ ಮಳೆ ಕಾರಣ ನೆರೆ ಬಂದು ಬಸ್ ಫಲ್ಗುಣಿ ನದಿಗೆ ಉರುಳಿತ್ತು. ಪ್ರವಾಹದ ನೀರಿಗೆ ಸಿಲುಕಿ ನಡೆದ ದುರ್ಘಟನೆಯಲ್ಲಿ ಚಾಲಕ ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಶಾಲೆಗೆ ಕಾರ್ಮಿಕ ಆಯುಕ್ತರು ಸೂಚನೆ ನೀಡಿದ್ದರು. ಅಪಘಾತ ನಡೆಯುವ ಎರಡು ತಿಂಗಳ ಮೊದಲೇ ಚಾಲಕ ಬದ್ರುದ್ದೀನ್ ನ ಪರವಾನಗಿ ಅವಧಿ ಮುಗಿದಿದ್ದ ಕಾರಣ ವಿಮಾ ಕಂಪನಿ ಪರಿಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ಶಾಲಾ ಆಡಳಿತ ಮಂಡಳಿಯೇ ಪರಿಹಾರ ಪಾವತಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
