23/04/2026

Law Guide Kannada

Online Guide

ಮೃತನ ಜೇಬಿನಲ್ಲಿ ಟಿಕೆಟ್ ಸಿಗದಿದ್ದಕ್ಕೆ ಪರಿಹಾರ ಇಲ್ಲ ಎನ್ನುವಂತಿಲ್ಲ- ಹೈಕೋರ್ಟ್

ಬೆಂಗಳೂರು: ರೈಲ್ವೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ರೈಲ್ವೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣ ನೀಡಿ ಆತನ ಅವಲಂಬಿತರಿಗೆ ಪರಿಹಾರ ನೀಡಲು ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಹಾಗೂ ಮಕ್ಕಳಿಗೆ 8 ಲಕ್ಷ ರೂ. ಪರಿಹಾರ ಕೊಡಲು ಆದೇಶಿಸಿದೆ.

ದಶಕದ ಹಿಂದೆ ಆಕಸ್ಮಿಕವಾಗಿ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದ ವಿಜಯಪುರದ ಅಮಿನಾಸಾಬ್ ಮುಲ್ಲಾ ಅವರ ಪತ್ನಿ ಹಾಗೂ ಮಕ್ಕಳಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ತಮಗೆ ಪರಿಹಾರ ನಿಗದಿಪಡಿಸಲು ನಿರಾಕರಿಸಿದ್ದ ರೈಲ್ವೇ ಪರಿಹಾರ ಕ್ಲೇಮು ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಮೃತ ಅಮಿನಾಸಾಬ್ ಮುಲ್ಲಾ ಅವರ ಪತ್ನಿ ಮತ್ತು ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರ ಪೀಠ ಈ ಆದೇಶ ಮಾಡಿದೆ.

2015ರ ಏ.6ರಂದು ವಿಜಯಪುರ ಮತ್ತು ಮಿಂಚಿನಹಾಳ ರೈಲು ನಿಲ್ದಾಣಗಳ ಮಧ್ಯೆ ರೈಲು ಟ್ರ್ಯಾಕ್ ನಲ್ಲಿ ಒರ್ವ ಪುರುಷನ ಮೃತದೇಹ ಪತ್ತೆಯಾಗಿದೆ ಎಂದು ರೈಲ್ವೆಯ ಲೋಕೋ ಪೈಲಟ್ ವಾಕಿಟಾಕಿಯ ಮೂಲಕ ಸಂದೇಶ ರವಾನಿಸಿದ್ದರು. ಜತೆಗೆ ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿತ್ತು ಎಂದು ರೈಲ್ವೆ ನ್ಯಾಯಾಧಿಕರಣ ತಿಳಿಸಿದೆ. ಮೃತನ ಮರಣೋತ್ತರ ಪರೀಕ್ಷಾ ವರದಿಯೂ ಹಲವು ಅಂಗಗಳಿಗೆ ಗಾಯಗಳಾಗಿ ವ್ಯಕ್ತಿ ಸಾವನಪ್ಪಿರುವುದಾಗಿ ಹೇಳಿದೆ. ಒಟ್ಟಾರೆಯಾಗಿ ಲಭ್ಯವಿರುವ ಎಲ್ಲ ದಾಖಲೆಗಳು, ರೈಲ್ವೆ ಅಪಘಾತದಲ್ಲಿಯೇ ಸಾವನ್ನಪ್ಪಿರುವುದಾಗಿ ಖಚಿತಪಡಿಸುತ್ತವೆ ಎಂದು ಪೀಠ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ…?
2015ರ ಏ.6ರಂದು ಅಮಿನಾಸಾಬ್ ಮುಲ್ಲಾಎಂಬುವವರು ವಿಜಯಪುರ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಲಿಂಬಾಲಾಗೆ ತೆರಳಲು ಟಿಕೆಟ್ ಖರೀದಿಸಿ ಅಲ್ಲಿಯೇ ರೈಲು ಹತ್ತಿದರು. ಪ್ರಯಾಣದ ವೇಳೆ ಚಲಿಸುವ ರೈಲಿನಲ್ಲಿ ಆಕಸ್ಮಿಕವಾಗಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಆ ಘಟನೆ ಹಿನ್ನೆಲೆಯಲ್ಲಿ ಮೃತರ ಕುಟುಂಬ ಪರಿಹಾರ ನೀಡುವಂತೆ ರೈಲ್ವೆ ಕೈಮ್ ಟ್ರಿಬ್ಯುನಲ್ ಮೊರೆ ಹೋಗಿದ್ದರು.

ಆದರೆ ನ್ಯಾಯಮಂಡಳಿ ಅಪಘಾತದಲ್ಲಿ ಅಮಿನಸಾಬ್ ಸಾವನ್ನಪ್ಪಿರುವ ಬಗ್ಗೆ ಯಾವುದೇ ಮಾಹಿತಿಯನ್ನು ರೈಲ್ವೆಗೆ ನೀಡಿಲ್ಲ ಮತ್ತು ಸಾವನ್ನಪ್ಪಿರುವ ಪ್ರಯಾಣಿಕರ ಜೇಬಿನಲ್ಲಿ ಟಿಕೆಟ್ ದೊರೆತಿಲ್ಲ. ಹಾಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತ್ತು. ಹಾಗಾಗಿ ಮೃತನ ಪತ್ನಿ ಹಾಗೂ ಮಕ್ಕಳು ಹೈಕೋರ್ಟ್ ಮೊರೆ ಹೋಗಿದ್ದರು.

ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಟಿಕೆಟ್ ಕಳೆದು ಹೋಗಿರಬಹುದು. ಆದರೆ, ಟಿಕೆಟ್ ಜೇಬಿನಲ್ಲಿ ಇರಲ್ಲಿಲ್ಲ ಎಂಬ ಕಾರಣಕ್ಕೆ ನ್ಯಾಯಮಂಡಳಿ ಪರಿಹಾರಕ್ಕೆ ಅರ್ಹನಲ್ಲವೆಂದು ಹೇಳುವಂತಿಲ್ಲ. ಸಹಜವಾಗಿ ಮೃತನೆ ಕುಟುಂಬದವರು, ಆಘಾತಕ್ಕೆ ಒಳಗಾಗಿದ್ದರಿಂದ ಆ ಸಂದರ್ಭದಲ್ಲಿ ಅವರು ಟಿಕೆಟ್ ಬಗ್ಗೆ ಆಲೋಚಿಸಿ ಅದನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ನಂತರ ಸಲ್ಲಿಸದೇ ಇರಬಹುದು. ಹಾಗೆಂದ ಮಾತ್ರಕ್ಕೆ ಮೃತನ ಕುಟುಂಬ ಪರಿಹಾರಕ್ಕೆ ಅರ್ಹವಲ್ಲವೆಂದು ಹೇಳಲಾಗದು ಎಂದು ಆದೇಶ ನೀಡಿರುವ ನ್ಯಾಯಾಲಯ, ಮೃತನ ಕುಟುಂಬದ ಮೇಲ್ಮನವಿ ಮಾನ್ಯ ಮಾಡಿ ಬಡ್ಡಿ ಸಹಿತ 8 ಲಕ್ಷ ರೂ ಪರಿಹಾರವನ್ನು ಕುಟುಂಬಕ್ಕೆ ಪಾವತಿ ಮಾಡುವಂತೆ ನಿರ್ದೇಶನ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.