ನಾನ್ ಕಾಗ್ನಿಸೆಬಲ್ ಅಪರಾಧ ಪ್ರಕರಣ: ನ್ಯಾಯಾಧೀಶರ ಆದೇಶವಿಲ್ಲದೆ ಪೊಲೀಸರು ತನಿಖೆ ಮಾಡುವಂತಿಲ್ಲ
ಬೆಂಗಳೂರು: ಸಂಜ್ಞೆಯವಲ್ಲದ(ನಾನ್ ಕಾಗ್ನಿಸೆಬಲ್) ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ತನಿಖೆಗೆ ನ್ಯಾಯಾಧೀಶರ ಆದೇಶ ಕಡ್ಡಾಯವಾಗಿದೆ. ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಆದೇಶವಿಲ್ಲದೆ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿ ತನಿಖೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
ಪೊಲೀಸರು ದಾಖಲಿಸಿರುವ ಎಫ್ ಐಆರ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರಿನ ಹರಿರಾಜ್ ಶೆಟ್ಟಿ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು, ಸಂಜ್ಞೆಯವಲ್ಲದ (ನಾನ್ ಕಾಗ್ನಿಸೆಬಲ್) ಅಪರಾಧ ಪ್ರಕರಣಗಳಲ್ಲಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಆದೇಶವಿಲ್ಲದೆ ಪೊಲೀಸರು ಎಫ್ ಐಆರ್ ದಾಖಲಿಸಿ ತನಿಖೆ ಮಾಡುವಂತಿಲ್ಲ. ಜೊತೆಗೆ ಮ್ಯಾಜಿಸ್ಟ್ರೇಟ್ ಅನುಮತಿಯು ತನಿಖೆಗೆ ಆದೇಶ ಎನ್ನಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಾಗೆಯೇ ನಾನ್ ಕಾಗ್ನಿಸೆಬಲ್ ಅಪರಾಧ ಪ್ರಕರಣಗಳಲ್ಲಿ ತನಿಖೆ ಮುಂದುವರೆಸಲು ನ್ಯಾಯಾಲಯದ ಸಮ್ಮತಿ ಕೋರಿ ಪೊಲೀಸರು ಮನವಿ ಸಲ್ಲಿಸಿದಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ನ್ಯಾಯಪೀಠ ರೂಪಿಸಿದೆ.
ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ತನಿಖೆಗೆ ‘ಆದೇಶ’ ಪಡೆದಿಲ್ಲ. ಬದಲಿಗೆ ಅನುಮತಿ’ಪಡೆದಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆಗೆ ಅನುಮತಿಸಲಾಗಿದೆ ಎಂದಿದ್ದಾರೆ. ‘ತನಿಖೆಗೆ ಅನುಮತಿಸಲಾಗಿದೆ’ ಎಂಬುದು ಸಿಆರ್ಪಿಸಿ ಸೆಕ್ಷನ್ 155(1) ಹಾಗೂ 155(2) ರ ಅವಶ್ಯಕತೆಗಳನ್ನು ಪೂರೈಸಿದಂತಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ನಾನ್ ಕಾಗ್ನಿಸಬಲ್ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ತನಿಖೆ ಮುಂದುವರೆಸಲು ಕೋರಿ ಮನವಿ ಸಲ್ಲಿಸಿದಾಗ ಮ್ಯಾಜಿಸ್ಟ್ರೇಟ್ ಇನ್ನು ಮುಂದೆ ‘ತನಿಖೆಗೆ ಅನುಮತಿಸಲಾಗಿದೆ’ ಎನ್ನುವಂತಿಲ್ಲ, ಇಂತಹ ಅನುಮೋದನೆಯು ಸಿಅರ್ಪಿಸಿ ಸೆಕ್ಷನ್ 155 ರಡಿ ಹಾಗೂ ಕಾನೂನು ದೃಷ್ಟಿಯಲ್ಲಿ ತನಿಖೆಗೆ ‘ಆದೇಶ’ವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
