ಆದೇಶ ರದ್ದು ಕೋರಿದ್ದ ಅರ್ಜಿ ವಜಾ: ಪೊಲೀಸರು ಬಂಧನ ಪೂರ್ವ ಅನುಸರಿಸಬೇಕಾದ ಕ್ರಮಗಳೇನು..? ವಿವರಣೆ ನೀಡಿದ ಹೈಕೋರ್ಟ್
ಬೆಂಗಳೂರು: ಆರೋಪಿಗೆ ನೋಟೀಸ್ ನೀಡದಿದ್ದರೂ ಬಂಧನಕ್ಕೆ ಆದೇಶ ಮಾಡಲಾಗಿದೆ ಎಂದು ಆರೋಪಿಸಿ ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್, ಆರೋಪಿಯನ್ನು ಬಂಧಿಸುವ ಮೊದಲು ಪೊಲೀಸರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ವಿವರಣೆ ನೀಡಿದೆ.
ನೋಟೀಸ್ ನೀಡದಿದ್ದರೂ ಬಂಧನಕ್ಕೆ ಆದೇಶ ಮಾಡಲಾಗಿದ್ದು ಈ ಆದೇಶ ರದ್ದು ಮಾಡಬೇಕೆಂದು ಕೋರಿ ಯುಗದೇವ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ನೋಟಿಸ್ ಅಥವಾ ಪ್ರಥಮ ಮಾಹಿತಿ ವರದಿಯ (ಎಫ್ಐಆರ್) ಪ್ರತಿಯನ್ನು ವಿದ್ಯುನ್ಮಾನ ಅಥವಾ ವಾಟ್ಸಾಪ್ ಮೂಲಕ ನೀಡುವ ಅಧಿಕಾರ ಪೊಲೀಸರಿಗೆ ಇಲ್ಲ, ಅದನ್ನು ಭೌತಿಕವಾಗಿಯೇ ನೀಡಬೇಕು. ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವ ಮುನ್ನ ನೋಟಿಸ್ ನೀಡುವುದು ಕಡ್ಡಾಯ. ಆದರೂ, ಆರೋಪಿಯು ಉದ್ದೇಶಪೂರ್ವಕವಾಗಿ ಪೊಲೀಸ್ ನೋಟಿಸ್ ಸ್ವೀಕರಿಸದೆ ತಲೆಮರೆಸಿಕೊಂಡು ತನಿಖೆಗೆ ಅಸಹಕಾರ ತೋರಿದ ಸಂದರ್ಭದಲ್ಲಿ ನೇರವಾಗಿ ಬಂಧಿಸಬಹುದಾಗಿದೆ” ಎಂದು ತಿಳಿಸಿತು.
ಆರೋಪಿಗೆ ಪೊಲೀಸ್ ತನಿಖಾಧಿಕಾರಿಗಳು ನೋಟಿಸ್ ನೀಡಲು ಪ್ರಯತ್ನಿಸಿದಾಗ ಅರ್ಜಿದಾರ ಆರೋಪಿ, 40 ದಿನಗಳ ಕಾಲ ತಮಿಳುನಾಡಿನ ಕಡಲೂರು ಸೇರಿದಂತೆ ವಿವಿಧೆಡೆ ಸಂಚರಿಸುವ ಮೂಲಕ ಸ್ಥಳ ಬದಲಿಸಿ ಪೊಲೀಸರಿಗೆ ಸಿಗದಂತೆ ಓಡಾಡಿದ್ದರು. ಈ ವಿಷಯ ಕರೆ ವಿವರಗಳಿಂದ ಸಾಬೀತಾಗಿದೆ. ಇದು ತನಿಖೆಗೆ ಅಸಹಕಾರ ನೀಡುವುದು ಹಾಗೂ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ನೋಟಿಸ್ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಆರೋಪಿಯು ನೋಟಿಸ್ ಸ್ವೀಕರಿಸಲು ನಿರಾಕರಿಸಿದಾಗ ಅಥವಾ ತನಿಖೆಗೆ ಸಹಕರಿಸದಿದ್ದಾಗ, ಪೊಲೀಸರು ಅವರನ್ನು ಬಂಧಿಸುವ ಅಧಿಕಾರ ಹೊಂದಿರುತ್ತಾರೆ. ಈ ಪ್ರಕರಣದಲ್ಲಿ ಅರ್ಜಿದಾರರು 40 ದಿನಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಇದು ಬಂಧನಕ್ಕೆ ಪೂರಕವಾದ ಸನ್ನಿವೇಶವಾಗಿದೆ. ಆದ್ದರಿಂದ, ಅರ್ಜಿದಾರರನ್ನು ಬಂಧಿಸಿರುವಲ್ಲಿ ಯಾವುದೇ ಕಾನೂನು ಲೋಪಗಳು ಕಾಣುತ್ತಿಲ್ಲ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಏನಿದು ಪ್ರಕರಣ
ಜೈ ಭೈರವಿ ದೇವಿ ಫೈನಾನ್ಶಿಯಲ್ ಸಲ್ಯೂಷನ್ಸ್ ಎಂಬ ಸಂಸ್ಥೆಯನ್ನು ಯುಗದೇವ್ ಮತ್ತವರ ಪತ್ನಿ ಪ್ರಾರಂಭಿಸಿ, ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದ್ದರು. ಅರ್ಜಿದಾರರು ಮತ್ತವರ ಪತ್ನಿಯ ಖಾತೆಗೆ ಸುಮಾರು 98 ಲಕ್ಷ ರೂಪಾಯಿ ಪಾವತಿಸಲಾಗಿತ್ತು. ಪ್ರಕರಣ ಸಂಬಂಧ ದೂರು ದಾಖಲಿಸಿರುವ ಮೂವರಿಂದ 39 ಲಕ್ಷ ರೂಪಾಯಿ ಬಂಡವಾಳ ಹೂಡಿಕೆಯಾಗಿತ್ತು. ಆ ಹಣ ವಾಪಸ್ ನೀಡಿದಿರುವುದಕ್ಕೆ ಆರೋಪಿ ಯುಗದೇವ್ ವಿರುದ್ಧ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿ ಎಫ್ ಐಆರ್ ದಾಖಲಿಸಿದ ಆಡುಗೋಡಿ ಠಾಣಾ ಪೊಲೀಸರು, ಅರ್ಜಿದಾರರಿಗೆ ನೋಟಿಸ್ ಜಾರಿಗೊಳಿಸಲು ಮುಂದಾಗಿದ್ದರು. ಆದರೆ, ಅರ್ಜಿದಾರ ಆರೋಪಿ 40 ದಿನಗಳ ಕಾಲ ನೋಟಿಸ್ ಪಡೆಯದೆ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದರು.
40 ದಿನಗಳ ಬಳಿಕ ತಮಿಳುನಾಡಿನ ಕಡಲೂರಿನಲ್ಲಿರುವುದು ಗೊತ್ತಾಗಿ ಆರೋಪಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಸಹಕರಿಸದ್ದಕ್ಕೆ ವಶಕ್ಕೆ ಪಡೆದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ಬಳಿಕ, ಮ್ಯಾಜಿಸ್ಟ್ರೇಟ್ ಬಂಧನ ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಿಎನ್ಎಸ್ಎಸ್ ಪ್ರಕಾರ ಪೊಲೀಸರು ತನಗೆ ವಿದ್ಯುನ್ಮಾನ ಅಥವಾ ಭೌತಿಕವಾಗಿ ನೋಟಿಸ್ ನೀಡಿಲ್ಲ. ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಆರೋಪಿ ಸಹಕರಿಸದ ಸಂದರ್ಭದಲ್ಲಿ, ಆತ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಪೊಲೀಸರು ಮಹಜರ್ ಬರೆಯಬೇಕು. ಆ ವಿಚಾರವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿ ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು. ಪೊಲೀಸರು ಈ ನಿಯಮಗಳನ್ನು ಪಾಲಿಸದ ಕಾರಣಕ್ಕೆ ತನ್ನನ್ನ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ವಿಚಾರಣೆ ವೇಳೆ ಆರೋಪಿ ವಾದಿಸಿದ್ದನು. ಆದರೆ ಆರೋಪಿಯ ಅರ್ಜಿಯನ್ನ ಹೈಕೋರ್ಟ್ ತಿರಸ್ಕರಿಸಿ ತೀರ್ಪು ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
