04/05/2026

Law Guide Kannada

Online Guide

ST ವಿಚ್ಚೇದನ ಅರ್ಜಿ: ವಿಶೇಷ ವಿವಾಹ ಕಾಯ್ದೆ ವ್ಯಾಪ್ತಿಯಲ್ಲಿ ನಿರ್ದಿಷ್ಟ ನಿಬಂಧನೆಗಳಿಲ್ಲ- ಹೈಕೋರ್ಟ್

ಬೆಂಗಳೂರು: ‘ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿದವರು ವಿವಾಹ ನೋಂದಣಿ ಮಾಡಿಸದ ಸಂದರ್ಭಗಳಲ್ಲಿ ಅಂತಹವರ ವಿಚ್ಛೇದನ ಅರ್ಜಿಯನ್ನು, ಹಿಂದೂ ವಿವಾಹ ಕಾಯ್ದೆಯಡಿ ನಿರ್ವಹಿಸುವುದಕ್ಕೆ, ವಿಶೇಷ ವಿವಾಹ ಕಾಯ್ದೆ ವ್ಯಾಪ್ತಿಯಲ್ಲಿ ಯಾವುದೇ ನಿರ್ದಿಷ್ಟ ನಿಬಂಧನೆಗಳಿಲ್ಲ’ ಎಂದು ಹೈಕೋರ್ಟ್ ತೀರ್ಪು ನೀಡಿದೆ.

‘ಮೇದ’ ಜನಾಂಗಕ್ಕೆ ಸೇರಿದ ದಂಪತಿಯ ಪ್ರಕರಣವೊಂದರಲ್ಲಿ ವಿಶೇಷ ವಿವಾಹ ಕಾಯ್ದೆ ಅಡಿ ವಿಚ್ಛೇದನ ಕೋರಿ ಪತಿ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದುವರಿಸುವ ಕೌಟುಂಬಿಕ ನ್ಯಾಯಾಲಯದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಗೆ ಪತ್ನಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೆ.ಮನ್ಮಥರಾವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಈ ಕುರಿತಂತೆ ಕನಕಪುರ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದ ನ್ಯಾಯಪೀಠವು, ವಿಚ್ಛೇದನ ಅರ್ಜಿಯನ್ನು ನಿರ್ವಹಿಸಲು, ವಿಶೇಷ ವಿವಾಹ ಕಾಯ್ದೆ-1954ರ ಅಡಿಯಲ್ಲಿ ಪೂರ್ವಾಪೇಕ್ಷಿತವಾಗಿ ವಿವಾಹವನ್ನು ನೋಂದಾಯಿಸುವ ಅಗತ್ಯವಿಲ್ಲ ಎಂದಿದೆ.

ವಿಶೇಷ ವಿವಾಹ ಕಾಯ್ದೆಯಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು, ಮದುವೆ ಆಗಿರುವುದಕ್ಕೆ ಸಂಬಂಧಿಸಿದ ನೋಂದಣಿ ಕಡ್ಡಾಯ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ವಿಶೇಷ ವಿವಾಹ ಕಾಯ್ದೆಯ ಕಲಂ 15 ಮದುವೆ ನೋಂದಣಿಗೆ ಅಗತ್ಯವಾದ ಷರತ್ತುಗಳನ್ನು ಮಾತ್ರ ವಿವರಿಸುತ್ತದೆಯೇ ಹೊರತು, ಮದುವೆಯ ನೋಂದಣಿ ಆಗಿಲ್ಲ ಎಂದರೆ ವಿಚ್ಛೇದನ ಅರ್ಜಿ ಸಲ್ಲಿಸಲಾಗದು ಎಂದು ಎಲ್ಲೂ ಸ್ಪಷ್ಟಪಡಿಸುವುದಿಲ್ಲ’ ಎಂದು ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ..
ಬುಡಕಟ್ಟು ವ್ಯಾಪ್ತಿಯ ‘ಮೇದ’ ಪಂಗಡಕ್ಕೆ ಸೇರಿದ ದಂಪತಿ 2006ರ ಏಪ್ರಿಲ್ 30ರಂದು ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದಲ್ಲಿ ಮೇದ ಜನಾಂಗದ ಪದ್ಧತಿ, ಸಂಪ್ರದಾಯಗಳಿಗೆ ಅನಗುಣವಾಗಿ ಮದುವೆಯಾಗಿದ್ದರು. ಇವರಿಗೆ ಒಂದು ಹೆಣ್ಣು ಮಗು ಜನಿಸಿದ್ದು ಸದ್ಯ ತಾಯಿಯ ಜೊತೆಗಿದೆ. ಪತಿ-ಪತ್ನಿ 2009ರ ಫೆಬ್ರುವರಿ 18ರಿಂದ ಮನಸ್ತಾಪಗಳ ಕಾರಣ ಪ್ರತ್ಯೇಕವಾಗಿದ್ದಾರೆ. ಈ ನಡುವೆ ಪತಿ, ಹಿಂದೂ ವಿವಾಹ ಕಾಯ್ದೆ-1955ರ ಕಲಂ 13ರ ಅಡಿಯಲ್ಲಿ ವಿಚ್ಛೇದನ ಕೋರಿ ಕನಕಪುರ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಚ್ಛೇದನ ಕೋರಿಕೆಯ ಈ ಅರ್ಜಿ ಹಿಂದೂ ವಿವಾಹ ಕಾಯ್ದೆಯ ಕಲಂ 2 (2)ರಿಂದ ಹೊರಗಿದೆ’ ಎಂಬ ಕಾರಣಕ್ಕೆ ತಿರಸ್ಕೃತಗೊಂಡಿತ್ತು. (ಹಿಂದೂ ವಿವಾಹ ಕಾಯ್ದೆ ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಬ್ಬರಿಗೆ ಅನ್ವಯಿಸಿದರೂ, ಪರಿಶಿಷ್ಟ ಪಂಗಡದ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ. ಕಲಂ 2(2) ಕಾಯ್ದೆಯ ಅನ್ವಯಿಕತೆಗೆ ಸಂಬಂಧಿಸಿದ ಒಂದು ಪ್ರಮುಖ ವಿನಾಯಿತಿಯನ್ನು ವಿವರಿಸುತ್ತದೆ) ನಂತರ ಪತಿ, ವಿಶೇಷ ವಿವಾಹ ಕಾಯ್ದೆ-1954ರ ಕಲಂ 27(ಬಿ) ಅಡಿಯಲ್ಲಿ ಹೊಸ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಕ್ಷೇಪಿಸಿದ್ದ ಪತ್ನಿ ಪರ ವಕೀಲರು ‘ಮದುವೆಯನ್ನು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಾಯಿಸಿಲ್ಲ’ ಎಂಬ ವಾದಾಂಶ ಮುಂದಿಟ್ಟಿದ್ದರು. ಆದರೆ, ಕನಕಪುರದ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ಕೋರ್ಟ್ 2025ರ ಜೂನ್ 26ರಂದು ಈ ವಾದವನ್ನು ತಿರಸ್ಕರಿಸಿ ಆದೇಶಿಸಿತ್ತು. ‘ಈ ಕುರಿತ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.