04/10/2026

Law Guide Kannada

Online Guide

‘ವಿಸಿಟೇಶನ್ ಟೈಮ್’ ಬದಲಿಗೆ ‘ಪೇರೆಂಟಿಂಗ್ ಟೈಮ್’ ಎಂಬ ಪದ ಬಳಸಿ – ಹೈಕೋರ್ಟ್

ಬೆಂಗಳೂರು: ‘ಮಕ್ಕಳ ಪಾಲನೆ-ಪೋಷಣೆ ಹಾಗೂ ಕಸ್ಟಡಿ ಪ್ರಕರಣಗಳಲ್ಲಿ ‘ವಿಸಿಟೇಶನ್ ಟೈಮ್’ ಪದ ಬಳಕೆಗೆ ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ ‘ಪೇರೆಂಟಿಂಗ್ ಟೈಮ್’ ಬಳಸುವಂತೆ ಸೂಚಿಸಿದೆ.

ಮಕ್ಕಳ ಭೇಟಿಯ ಹಕ್ಕು ಕುರಿತಾದ ಪ್ರಕರಣವೊಂದರಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಮಗುವಿನ ಜೀವನದಲ್ಲಿ ಯಾವುದೇ ಪೋಷಕರು ಅತಿಥಿಗಳಲ್ಲ. ‘ವಿಸಿಟೇಶನ್ ಟೈಮ್’ (ಭೇಟಿಯ ಸಮಯ) ಎಂಬ ಪದದ ಬದಲಿಗೆ ‘ಪೇರೆಂಟಿಂಗ್ ಟೈಮ್’ (ಲಾಲನೆ-ಪಾಲನೆ ಸಮಯ) ಎಂಬ ಪದವನ್ನು ಬಳಸಬೇಕು’ ಎಂದು ತಿಳಿಸಿದೆ.

ದಂಪತಿ 2017ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 9 ವರ್ಷದ ಮಗು ತಾಯಿಯ ಸುಪರ್ದಿಯಲ್ಲಿದೆ. ತಂದೆ ಮಗುವನ್ನು ಕೊನೆಯ ಬಾರಿ ನೋಡಿದ್ದು, ಮಗು ಮೂರು ತಿಂಗಳ ವಯಸ್ಸಿನಲ್ಲಿದ್ದಾಗ ಎಂಬುದನ್ನು ಗಮನಿಸಿದ ವಿಚಾರಣಾ ನ್ಯಾಯಾಲಯ ತಂದೆಗೆ ವಾರಾಂತ್ಯಗಳಲ್ಲಿ ಮಗುವನ್ನು ಭೇಟಿ ಮಾಡಲು ಅವಕಾಶ ನೀಡಿತ್ತು. ಶಾಲೆಯ ರಜೆಗಳಲ್ಲಿ ಶೇ 50ರಷ್ಟು ಅವಧಿ ಹಾಗೂ ಪರ್ಯಾಯ ದಿನಗಳಲ್ಲಿ ವಾಟ್ಸ್ ಆ್ಯಪ್ ಕರೆಗಳಿಗೆ ಅವಕಾಶ ಕಲ್ಪಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠವು, ಮಗುವಿನ ಜೀವನದಲ್ಲಿ ಒಬ್ಬ ಪೋಷಕರು ಮಾತ್ರವೇ ಮುಖ್ಯ, ಮತ್ತೊಬ್ಬರು ಕೇವಲ ಭೇಟಿ ನೀಡುವ ಅತಿಥಿ ಎಂಬಂತೆ “ವಿಸಿಟೇಷನ್” ಪದ ಬಳಕೆಯಾಗುತ್ತಿದೆ. ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ಯಾವುದೇ ಕಟ್ಟುನಿಟ್ಟಿನ ಸೂತ್ರಗಳಿಲ್ಲ. ವಿಚಾರಣಾ ನ್ಯಾಯಾಲಯಗಳು ಪೋಷಕರು, ಮಕ್ಕಳ ಭಾವನೆ ಹಾಗೂ ಅವರ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಅವುಗಳಲ್ಲಿ ಮಗುವಿನ ಹಿತಾಸಕ್ತಿಯೇ ಪ್ರಧಾನವಾಗಿರಬೇಕು “ಪೋಷಕರ ನಡುವಿನ ವ್ಯಾಜ್ಯಗಳಲ್ಲಿ ಮಗುವಿನ ಭವಿಷ್ಯ ಮತ್ತು ಕಲ್ಯಾಣವೇ ಮುಖ್ಯ. ತಂದೆ-ತಾಯಿ ಇಬ್ಬರ ಪ್ರೀತಿ ಮತ್ತು ಮಮತೆ ಮಗುವಿಗೆ ದೊರೆಯುವಂತೆ ನ್ಯಾಯಾಲಯಗಳು ಕ್ರಮ ಕೈಗೊಳ್ಳಬೇಕು. ಆದರೆ, ಅಂತಹ ವ್ಯವಸ್ಥೆಯನ್ನು ಆತುರದಲ್ಲಿ ಜಾರಿಗೊಳಿಸಬಾರದು. ‘ಹಾಲಿ ಪ್ರಕರಣದಲ್ಲಿ ಪ್ರತಿ ದಿನ ಮಗುವಿಗೆ ನಿಗದಿತ ಅವಧಿಯಲ್ಲಿ ವಾಟ್ಸ್ ಆ್ಯಪ್ ಕರೆ ಮಾಡಲು ಸೂಚಿಸಿರುವ ವಿಚಾರಣಾ ನ್ಯಾಯಾಲಯದ ನಿರ್ಧಾರ ಪ್ರಾಯೋಗಿಕವಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮಗುವಿನ ಶಾಲಾ ರಜೆಗಳ ಶೇ 50ರಷ್ಟು ಅವಧಿಯ ಭೇಟಿಗೆ ತಂದೆಗೆ ನೀಡಲಾಗಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಪೀಠ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಎರಡು ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಮಗುವಿನೊಂದಿಗೆ “ಪೇರೆಂಟಿಂಗ್ ಟೈಮ್” ಕಳೆಯಲು ಅವಕಾಶ ಕಲ್ಪಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.