ಕೇಂದ್ರ ಸರ್ಕಾರಿ ನೌಕರರ ವಿರುದ್ಧ ತನಿಖೆ ನಡೆಸಲು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅಧಿಕಾರವಿದೆಯೋ..? ಇಲ್ಲವೋ..?
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ನಡೆಸಲು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ರಾಜಸ್ಥಾನ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಸತೀಶ್ ಚಂದ್ರ ಶರ್ಮಾ, ಅವರನ್ನು ಒಳಗೊಂಡ ವಿಭಾಗಿಯ ಪೀಠವು, ಭ್ರಷ್ಟಾಚಾರ ತಡೆ ಕಾಯ್ದೆ, 1988ರಡಿ ಕೇಂದ್ರ ಸರ್ಕಾರದ ನೌಕರರು ಮಾಡಿದ ಅಪರಾಧಗಳಿಗೆ ಪ್ರತ್ಯೇಕ ಅಥವಾ ಏಕೈಕ ತನಿಖಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದಿಲ್ಲ ಮತ್ತು ಕಾನೂನಿನಲ್ಲಿ ನಿಗದಿಪಡಿಸಿದ ಹುದ್ದೆಯ ಅರ್ಹತೆಯ ಷರತ್ತಿಗೆ ಒಳಪಟ್ಟು, ರಾಜ್ಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಇಂತಹ ಅಪರಾಧಗಳನ್ನು ನೋಂದಣಿ ಮಾಡಿ ತನಿಖೆ ನಡೆಸಲು ಸಮರ್ಥವಾಗಿವೆ ಎಂದು ತೀರ್ಪು ನೀಡಿದೆ.
ರಾಜಸ್ಥಾನ ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಭ್ರಷ್ಟಾಚಾರ ನಿರೋಧಕ ಕಾಯ್ದೆ, 1988ರಡಿ ಕೇಂದ್ರ ಸರ್ಕಾರದ ನೌಕರರ ವಿರುದ್ಧ ಪ್ರಕರಣವನ್ನು ನೋಂದಣಿ ಮಾಡಿ. ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸಲು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅಧಿಕಾರವಿದೆ ಎಂದು ಹೈಕೋರ್ಟ್ ಸಮರ್ಥಿಸಿಕೊಂಡಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯನ್ನು (SLP) ವಜಾಗೊಳಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು, ಹೈಕೋರ್ಟ್ನ ತೀರ್ಮಾನದಲ್ಲಿ ಯಾವುದೇ ದೋಷವಿಲ್ಲ. ಭ್ರಷ್ಟಾಚಾರ ನಿರೋಧಕ ಕಾಯ್ದೆ, 1988ರಡಿ ರಾಜ್ಯದ ಭೌಗೋಳಿಕ ವ್ಯಾಪ್ತಿಯೊಳಗೆ ಕೇಂದ್ರ ಸರ್ಕಾರದ ನೌಕರರು ಮಾಡಿದ ಅಪರಾಧಗಳನ್ನು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (State Anti-Corruption Bureau) ತನಿಖೆ ನಡೆಸಬಹುದು ಹಾಗೂ ಈ ಅಧಿಕಾರವು ಕೇಂದ್ರ ತನಿಖಾ ದಳ (CBI)ಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ತಿಳಿಸಿತು.
ಭ್ರಷ್ಟಾಚಾರ ನಿರೋಧಕ ಕಾಯ್ದೆ (PC Act) ತನಿಖೆ ನಡೆಸಲು ಪ್ರತ್ಯೇಕ ವಿಧಾನವನ್ನು ವಿಶೇಷವಾಗಿ ಕಲ್ಪಿಸಿಲ್ಲ. ಸೆಕ್ಷನ್ 17ರ ಪ್ರಕಾರ, ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಅಪರಾಧಗಳನ್ನು ರಾಜ್ಯ ಸಂಸ್ಥೆ, ಕೇಂದ್ರ ಸಂಸ್ಥೆ ಅಥವಾ ಯಾವುದೇ ಪೊಲೀಸ್ ಸಂಸ್ಥೆ ತನಿಖೆ ನಡೆಸಬಹುದು; ಆದರೆ ತನಿಖೆ ನಡೆಸುವ ಪೊಲೀಸ್ ಅಧಿಕಾರಿ ನಿರ್ದಿಷ್ಟ ಹುದ್ದೆಯಲ್ಲಿರಬೇಕು ಎಂಬ ಅರ್ಹತೆಯಿದೆ. ಸೆಕ್ಷನ್ 17 ರಾಜ್ಯ ಪೊಲೀಸ್ ಅಥವಾ ರಾಜ್ಯದ ವಿಶೇಷ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ನೌಕರರ ವಿರುದ್ದ ಲಂಚ, ಭ್ರಷ್ಟಾಚಾರ ಮತ್ತು ದುರ್ವ್ಯವಹಾರಕ್ಕೆ ಸಂಬಂಧಿಸಿದ ಅಪರಾಧಗಳನ್ನು ನೋಂದಣಿ ಮಾಡುವುದು ಅಥವಾ ತನಿಖೆ ನಡೆಸುವುದನ್ನು ನಿರ್ಬಂಧಿಸುವುದಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು.
ಭ್ರಷ್ಟಾಚಾರ ನಿರೋಧಕ ಕಾಯ್ದೆ, 1988, ಕೇಂದ್ರ ಸರ್ಕಾರದ ನೌಕರರನ್ನು ಒಳಗೊಂಡ ಅಪರಾಧಗಳಿಗೆ ಯಾವುದೇ ಏಕೈಕ ತನಿಖಾ ವಿಧಾನ ಅಥವಾ ಸಂಸ್ಥೆಯನ್ನು ಕಲ್ಪಿಸಿಲ್ಲ, ಸೆಕ್ಷನ್ 17ರನ್ವಯ ರಾಜ್ಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಇಂತಹ ಅಪರಾಧಗಳನ್ನು ನೋಂದಣಿ ಮಾಡಿ ತನಿಖೆ ನಡೆಸಲು ಸಮರ್ಥವಾಗಿವೆ ಎಂದು ನ್ಯಾಯಪೀಠವು ದೃಢಪಡಿಸಿದೆ. ಆಪಾದಿತ ತೀರ್ಪಿನಲ್ಲಿ ಯಾವುದೇ ಕಾನೂನು ದೋಷವಿಲ್ಲವೆಂದು ಕಂಡು, ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸಲಾಗಿದೆ. ಬಾಕಿ ಇರುವ ಅರ್ಜಿಗಳು ಇದ್ದಲ್ಲಿ ಅವುಗಳನ್ನೂ ಅಂತಿಮಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ನೌಕರರಾಗಿದ್ದ ಅರ್ಜಿದಾರರು ರಾಜಸ್ಥಾನ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವು ಭ್ರಷ್ಟಾಚಾರ ನಿರೋಧಕ ಕಾಯ್ದೆ, 1988ರಡಿ ಪ್ರಾರಂಭಿಸಿದ ಕ್ರಿಮಿನಲ್ ಕ್ರಮಗಳನ್ನು ಪ್ರಶ್ನಿಸಿದ್ದರು. ಕೇಂದ್ರ ಸರ್ಕಾರದ ನೌಕರರಿಗೆ ಸಂಬಂಧಿಸಿದ ಅಪರಾಧಗಳನ್ನು ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ, 1946ರಡಿ ಕೇವಲ ಕೇಂದ್ರ ತನಿಖಾ ದಳ (CBI) ಮಾತ್ರ ತನಿಖೆ ನಡೆಸಬಹುದು; ರಾಜ್ಯ ಸಂಸ್ಥೆಗೆ ಅಧಿಕಾರವಿಲ್ಲ ಎಂದು ವಾದಿಸಲಾಗಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
