23/04/2026

Law Guide Kannada

Online Guide

ಶೇಕ್ಸ್‌ಪಿಯರ್‌ನಿಂದ ಗೀತೆಯವರೆಗೆ: ಸಾಹಿತ್ಯದ ಸುವಾಸನೆ ಮೂಡಿಸುವ ನ್ಯಾಯಮೂರ್ತಿ ದೀಕ್ಷಿತ್ ತೀರ್ಪುಗಳು

ಒಡಿಶಾ: ಸಾಮಾನ್ಯವಾಗಿ ನ್ಯಾಯಾಲಯದ ತೀರ್ಪುಗಳು ತಾಂತ್ರಿಕ ಶೈಲಿಯಲ್ಲಿ ಇರಲಿವೆ. ಆದರೆ ಒಡಿಶಾ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ್ ದೀಕ್ಷಿತ್ ಅವರ ತೀರ್ಪುಗಳು ವಿಭಿನ್ನತೆ ಮೆರೆದಿವೆ. ಸಾಹಿತ್ಯ, ತತ್ವಶಾಸ್ತ್ರ ಮತ್ತು ಇತಿಹಾಸವನ್ನು ಬೆರೆಸುವ ಮೂಲಕ ಅವರು ನ್ಯಾಯಾಂಗ ಆದೇಶಗಳಿಗೆ ಹೊಸ ಆಯಾಮ ನೀಡಿದ್ದಾರೆ.

ಪ್ರಸ್ತುತ ಒಡಿಶಾ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ ದೀಕ್ಷಿತ್, ತಮ್ಮ ತೀರ್ಪುಗಳಲ್ಲಿ ಶೇಕ್ಸ್‌ಪಿಯರ್‌ನಿಂದ ಗೀತೆಯವರೆಗೆ ವಿವಿಧ ಉಲ್ಲೇಖಗಳನ್ನು ಬಳಸುವ ಮೂಲಕ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಮಾಡುತ್ತಿದ್ದಾರೆ. ಅವರ ತೀರ್ಪುಗಳು ಕೇವಲ ಕಾನೂನು ವಲಯದಲ್ಲೇ ಅಲ್ಲದೆ, ಓದುಗರಲ್ಲಿಯೂ ಹೆಚ್ಚು ಆಸಕ್ತಿ ಹುಟ್ಟಿಸುತ್ತಿವೆ.
ಜನಸಂಖ್ಯೆ ಕುರಿತ ಕಾಳಜಿ ಗ್ರಾಮ ಪಂಚಾಯತ್ ಸದಸ್ಯರ ಅನರ್ಹತೆ ವಿಚಾರಣೆಯಲ್ಲಿ, ಎರಡು ಮಕ್ಕಳ ನೀತಿಯನ್ನು ಸಮರ್ಥಿಸುವ ವೇಳೆ, ಬ್ರಿಟಿಷ್ ಮಾಜಿ ಪ್ರಧಾನಿ ವಿಂಸ್ಟನ್ ಚರ್ಚಿಲ್ ಅವರ ಮಾತುಗಳನ್ನು ಉಲ್ಲೇಖಿಸಿ “ಭಾರತ ಒಂದು ರಾಷ್ಟ್ರವಲ್ಲ, ಕೇವಲ ಜನಸಂಖ್ಯೆ” ಎಂದು ಹೇಳಿದ್ದಾರೆ. ಇದರಿಂದ ಜನಸಂಖ್ಯೆ ವೃದ್ಧಿಯನ್ನು ನಾಗರಿಕತಾ ಸವಾಲಾಗಿ ಚಿತ್ರಿಸಲಾಗಿದೆ. ಇದೇ ವೇಳೆ ತತ್ವಜ್ಞಾನಿ ಬರ್ಟ್ರಾಂಡ್ ರಸ್ಸೆಲ್ ಅವರ “ಜನಸಂಖ್ಯೆ ಸ್ಫೋಟವು ಹೈಡ್ರೋಜನ್ ಬಾಂಬ್‌ಗಿಂತ ಅಪಾಯಕಾರಿ” ಎಂಬ ಹೇಳಿಕೆಯನ್ನು ಕೂಡ ಉಲ್ಲೇಖಿಸಲಾಗಿದೆ.

ಮಾನವೀಯತೆಯೇ ಮುಖ್ಯ
ಇಂಗ್ಲಿಷ್ ಲೇಖಕ ಜಾರ್ಜ್ ಆರ್ವೆಲ್ ಅವರ ಮಾತುಗಳನ್ನು ಉಲ್ಲೇಖಿಸಿ, ಉಗ್ರ ದಾಳಿಯಲ್ಲಿ ಗಾಯಗೊಂಡಿದ್ದ CRPF ಜವಾನನ ಪತ್ನಿಗೆ ಸಹಾನುಭೂತಿ ನೇಮಕಾತಿ ನೀಡುವ ತೀರ್ಪನ್ನು ನ್ಯಾಯಮೂರ್ತಿ ದೀಕ್ಷಿತ್ ಸಮರ್ಥಿಸಿದ್ದಾರೆ.

ರಕ್ಷಣಾ ಸಿಬ್ಬಂದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಾಂತ್ರಿಕ ಕಟ್ಟುನಿಟ್ಟಿಗಿಂತ ಮಾನವೀಯತೆಯೇ ಮುಖ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಬೈಬಲ್ ಉದಾಹರಣೆಯ ಮೂಲಕ ನ್ಯಾಯ ವಿವರಣೆ
ಹೆಚ್ಚುವರಿ ವೇತನ ವಸೂಲಾತಿ ವಿಚಾರಣೆಯಲ್ಲಿ ಆದಾಮ್ ಮತ್ತು ಈವ್ ಕಥೆಯನ್ನು ಉಲ್ಲೇಖಿಸಿ, ವಾದ ಕೇಳಿಸಿಕೊಳ್ಳುವ ಅವಕಾಶ ನೀಡುವ ಮಹತ್ವವನ್ನು ನ್ಯಾಯಮೂರ್ತಿ ದೀಕ್ಷಿತ್ ವಿವರಿಸಿದ್ದಾರೆ. ಒಟ್ಟಾರೆ, ನ್ಯಾಯಮೂರ್ತಿ ದೀಕ್ಷಿತ್ ಅವರ ತೀರ್ಪುಗಳು ಕಾನೂನಿಗೆ ಮಾತ್ರ ಸೀಮಿತವಾಗದೆ, ಸಾಹಿತ್ಯದ ಸ್ಪರ್ಶದೊಂದಿಗೆ ಜನಸಾಮಾನ್ಯರಿಗೆ ಹತ್ತಿರವಾಗುತ್ತಿರುವುದು ವಿಶೇಷವಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.