ಕ್ರಿಮಿನಲ್ ಅಪರಾಧಿಗಳಿಗೆ ಶಾಸನ ಸಭೆಗಳಿಂದ ಶಾಶ್ವತ ನಿರ್ಬಂಧಕ್ಕೆ ಕೇಂದ್ರ ವಿರೋಧ: ಸುಪ್ರೀಂಗೆ ಅಫಿಡವಿಟ್ ಸಲ್ಲಿಕೆ
ನವದೆಹಲಿ: ಕ್ರಿಮಿನಲ್ ಅಪರಾಧಗಳಲ್ಲಿ ಶಿಕ್ಷೆಗೆ ಗುರಿಯಾದವರನ್ನು ಶಾಸನ ಸಭೆಗಳಿಂದ ಶಾಶ್ವತವಾಗಿ ದೂರ ಇರಿಸಬೇಕು ಎಂಬ ಕೋರಿಕೆಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು ಈ ಸಂಬಂಧ ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿ ತನ್ನ ಅಭಿಪ್ರಾಯ ತಿಳಿಸಿದೆ.
ಈ ಬಗೆಯಲ್ಲಿ ನಿರ್ಬಂಧ ವಿಧಿಸುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ ಎಂದು ಕೇಂದ್ರ ಸರ್ಕಾರ ಪ್ರಮಾಣಪತ್ರದಲ್ಲಿ ತಿಳಿಸಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ರಾಜಕಾರಣಿಗಳ ಮೇಲೆ ಜೀವಾವಧಿ ನಿಷೇಧ ಮತ್ತು ದೇಶದಲ್ಲಿ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯಿತು. ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ, ಅನರ್ಹತೆಯ ಅವಧಿಯನ್ನು ನಿರ್ಧರಿಸುವುದು ಸಂಸತ್ತಿನ ವ್ಯಾಪ್ತಿಗೆ ಮಾತ್ರ ಎಂದು ತಿಳಿಸಿದೆ.
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯು, ಕ್ರಿಮಿನಲ್ ಅಪರಾಧ ಎಸಗಿದವರು ಜೀವನಪರ್ಯಂತ ಚುನಾವಣೆಗೆ ಸ್ಪರ್ಧಿಸದಂತೆ ಮಾಡಬೇಕು, ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂಬ ಕೋರಿಕೆಯನ್ನು ಹೊಂದಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8(1)ರ ಪ್ರಕಾರ, ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೆ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಇದೆ ಎಂದು ಕೇಂದ್ರವು ವಿವರಿಸಿದೆ.
‘ಈ ಸೆಕ್ಷನ್ನಲ್ಲಿ ಹೇಳಿರುವ ಅನರ್ಹತೆಯ ಅವಧಿಗೆ ಮಿತಿ ಇದೆ. ಇದು ಸಂಸತ್ತು ರೂಪಿಸಿದ ನೀತಿ. ಈ ಮಿತಿಯ ಬದಲಿಗೆ, ಜೀವನಪರ್ಯಂತ ನಿರ್ಬಂಧವನ್ನು ಹೇರುವುದು ಸರಿಯಾಗುವುದಿಲ್ಲ. ಜೀವಮಾನದ ನಿಷೇಧ ಹೇರುವುದು ಕಠಿಣ ಕ್ರಮವಾಗಿದ್ದು, ಪ್ರಸ್ತುತ ಅನರ್ಹತೆಯ ಅವಧಿಯಾಗಿರುವ ಆರು ವರ್ಷಗಳು ಅದನ್ನು ತಡೆಯಲು ಸಾಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆರು ವರ್ಷಗಳ ನಿರ್ಬಂಧ ಎನ್ನುವುದು ಸಾಂವಿಧಾನಿಕವಾಗಿ ಸರಿಯಾಗಿಯೇ ಇದೆ. ಅದು ಸಂಸತ್ತಿನ ಅಧಿಕಾರಗಳ ಮಿತಿಯಲ್ಲಿಯೇ ಇದೆ. ಯಾವುದೇ ಬಗೆಯ ದಂಡವನ್ನು ವಿಧಿಸುವ ಸಂದರ್ಭದಲ್ಲಿ ಸಂಸತ್ತು ಆ ದಂಡವು ತಪ್ಪಿನ ಪ್ರಮಾಣಕ್ಕೆ ಅನುಗುಣವಾಗಿ ಇದೆಯೇ, ಶಿಕ್ಷೆಯು ತರ್ಕಬದ್ಧವಾಗಿ ಇದೆಯೇ ಎಂಬುದನ್ನು ಪರಿಶೀಲಿಸುತ್ತದೆ ಎಂದು ಕೇಂದ್ರ ಸರ್ಕಾರ ವಿವರಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
