23/04/2026

Law Guide Kannada

Online Guide

ಜಿಲ್ಲಾ ನ್ಯಾಯಾಲಯಗಳ ತೀರ್ಪು ಜಾರಿಗೆ ಕೋರಿದ 10 ಲಕ್ಷ ಅರ್ಜಿಗಳು ಬಾಕಿ: ಸುಪ್ರೀಂ ಅಸಮಾಧಾನ, ಹೈಕೋರ್ಟ್ ಗಳಿಗೆ ನಿರ್ದೇಶನ

ನವವದೆಹಲಿ: ಜಿಲ್ಲಾ ನ್ಯಾಯಾಲಯಗಳ ತೀರ್ಪು ಜಾರಿಗೆ ನಿರ್ದೇಶನ ನೀಡುವಂತೆ ಕೋರಿದ 10 ಲಕ್ಷಕ್ಕೂ ಅಧಿಕ ಅರ್ಜಿಗಳು ವಿಚಾರಣೆಗೆ ಬಾಕಿ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಇವುಗಳ ಪರಿಣಾಮಕಾರಿ ಹಾಗೂ ತ್ವರಿತ ವಿಲೇವಾರಿಗೆ ವ್ಯವಸ್ಥೆ ಜಾರಿಗೊಳಿಸುವಂತೆ ಹೈಕೋರ್ಟ್ ಗಳಿಗೆ ನಿರ್ದೇಶನ ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ಪೀಠವು ಈ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ಬಾಕಿ ಪ್ರಕರಣಗಳ ಅಂಕಿ ಅಂಶವನ್ನು ಪರಿಶೀಲಿಸಿದ ಬಳಿಕ, ಈ 10 ಲಕ್ಷ ಅರ್ಜಿಗಳ ಪೈಕಿ ಎಂಟು ಲಕ್ಷ ಅರ್ಜಿಗಳು ಆರು ತಿಂಗಳಿಗಿಂತಲೂ ಹಳೆಯವು. ಆರು ತಿಂಗಳಿಗಿಂತಲೂ ಧೀರ್ಘಕಾಲದಿಂದ ಬಾಕಿ ಇರುವ 7,95,981 ಪ್ರಕರಣಗಳು ಇವೆ. ಸದ್ಯಕ್ಕೆ ಪರಿಸ್ಥಿತಿ ತೀರಾ ಆತಂಕಕಾರಿ ಮತ್ತು ಅಸಮಾಧಾನಕಾರಿ ಎಂದು ನ್ಯಾಯಪೀಠ ಹೇಳಿತು.

ಪ್ರಮುಖವಾಗಿ ಆಸ್ತಿ ವ್ಯಾಜ್ಯಗಳು ಸೇರಿದಂತೆ ಸಿವಿಲ್ ಪ್ರಕರಣಗಳಲ್ಲಿ ತಮ್ಮ ಪರ ತೀರ್ಪು ಪಡೆದಲ್ಲಿಗೆ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಬಹುತೇಕ ಪ್ರಕರಣಗಳಲ್ಲಿ ವಿಜೇತ ಕಕ್ಷಿದಾರರು ನ್ಯಾಯಾಲಯ ಆದೇಶದ ಅನುಷ್ಠಾನವನ್ನು ಕೋರಿ ಮತ್ತೆ ನ್ಯಾಯಾಲಯದ ಕಟ್ಟೆ ಏರಬೇಕಾಗುತ್ತದೆ. ಆದೇಶ ಜಾರಿ ಅರ್ಜಿ ಸಲ್ಲಿಸಿ ಪ್ರತಿವಾದಿಗಳು ನ್ಯಾಯಾಲಯ ತೀರ್ಪು ಜಾರಿಗೆ ಬದ್ಧರಾಗಲು ವಿಫಲರಾಗಿದ್ದಾರೆ ಎನ್ನುವುದನ್ನು ಕೋರ್ಟ್ ಗಮನಕ್ಕೆ ತರಬೇಕಾಗುತ್ತದೆ.

ನ್ಯಾಯಾಲಯದಲ್ಲಿ ತಮ್ಮ ಪರ ತೀರ್ಪುಬಂದರೂ, ಅದು ಹಲವು ವರ್ಷಗಳ ಬಳಿಕವೂ ಫಲ ನೀಡದಾಗ ಅರ್ಜಿದಾರರು ತೀರ್ಪು ಜಾರಿಗೆ ಕ್ರಮ ಕೈಗೊಳ್ಳುವಂತೆ ಕೋರಿ ಅರ್ಜಿ ಸಲ್ಲಿಸುವ ಪರಿಸ್ಥಿತಿ ಇದೆ. ಆರು ತಿಂಗಳ ಒಳಗಾಗಿ ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ನ್ಯಾಯಪೀಠವು ಆದೇಶಿಸಿದೆ.

ಹಾಗೆಯೇ ಆದೇಶ ಜಾರಿಗೆ ಜಿಲ್ಲಾ ನ್ಯಾಯಾಂಗ ವ್ಯವಸ್ಥೆ ಕೈಗೊಂಡ ಕ್ರಮಗಳನ್ನು ಪ್ರಶಂಸಿಸಿದ ನ್ಯಾಯಪೀಠವು, ಕಳೆದ ಆರು ತಿಂಗಳಲ್ಲಿ 4.3 ಲಕ್ಷ ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 2025ರ ಮಾರ್ಚ್ ನಲ್ಲಿ ನೀಡಿದ ಸೂಚನೆಯ ಅನ್ವಯ ಒಂದು ವರ್ಷದಲ್ಲಿ ಸುಮಾರು 7.7 ಲಕ್ಷ ಬಾಕಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.