ಹೈಕೋರ್ಟ್ ನ್ಯಾ. ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರು: ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ ಕೇಜ್ರಿವಾಲ್
ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ವಿರುದ್ಧ ದೆಹಲಿಯ ಮಾಜಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಹೊಸ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದು ಇದರಲ್ಲಿ ಮಹತ್ವದ ಅಂಶವೊಂದನ್ನು ಪ್ರತಿಪಾದಿಸಿದ್ದಾರೆ.
ಹೌದು, ತಮ್ಮ ಮೇಲೆ ದಾಖಲಾಗಿರುವ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರಾಗಿದ್ದಾರೆ. ಸಿಬಿಐ ಪರ ಹಾಜರಾಗುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರ ಮೂಲಕ ಕೆಲಸ ಪಡೆಯುತ್ತಿದ್ದಾರೆ ಎಂದು ಅರವಿಂದ ಕೇಜ್ರವಾಲ್ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸಿದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶರ್ಮಾ ಅವರು ವಿಚಾರಣೆ ನಡೆಸಬಾರದು ಎಂದು ಕೇಜ್ರಿವಾಲ್ ಈ ಅಫಿಡವಿಟ್ ನಲ್ಲಿ ಪುನರುಚ್ಚರಿಸಿದ್ದಾರೆ.
ನ್ಯಾಯಾಮೂರ್ತಿ ಶರ್ಮಾ ಅವರ ಮಗ ಮತ್ತು ಮಗಳು ಇಬ್ಬರೂ ಕೇಂದ್ರ ಸರ್ಕಾರದ ವಕೀಲರಾಗಿ ಪಟ್ಟಿಯಲ್ಲಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಕೋರಿರುವ ಅರ್ಜಿ ಸಂಬಂಧ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್ ನಲ್ಲಿ ಅವರು ಹೀಗೆ ಹೇಳಿದ್ದಾರೆ.
ನ್ಯಾಯಮೂರ್ತಿ ಶರ್ಮಾ ಅವರ ಮಕ್ಕಳನ್ನು ಕೇಂದ್ರ ಸರ್ಕಾರಿ ವಕೀಲರನ್ನಾಗಿ ನೇಮಕ ಮಾಡಿಕೊಂಡಿರುವುದನ್ನು ತೋರಿಸುವ ದಾಖಲೆಗಳು ತನಗೆ ದೊರೆತಿವೆ. ಅವರ ಮಗ ಸುಪ್ರೀಂ ಕೋರ್ಟ್ನ ಗ್ರೂಪ್ ಎ ಪ್ಯಾನಲ್ ಕೌನ್ಸಿಲ್ ಆಗಿದ್ದರೆ, ಅವರ ಮಗಳು ಗ್ರೂಪ್ ಸಿ ಪ್ಯಾನಲ್ ಕೌನ್ಸಿಲ್ ಆಗಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಹೀಗಾಗಿ ನ್ಯಾಯಮೂರ್ತಿ ಶರ್ಮಾ ಅವರ ಪೀಠದ ಮುಂದೆ ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದರಿಂದ ನ್ಯಾಯಾಂಗ ತಟಸ್ಥ, ಸ್ವತಂತ್ರ್ಯವಾಗಿ ಕೆಲಸ ಮಾಡಲಿಕ್ಕಿಲ್ಲ ಎನ್ನುವ ಭಯ ಉಂಟಾಗಿದೆ. ಅದ್ದರಿಂದ ಪ್ರತ್ಯುತ್ತರ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆಯೂ ಕೇಜ್ರಿವಾಲ್ ಅವರು ಕೋರಿದ್ದಾರೆ.
‘ಈ ಕ್ರಿಮಿನಲ್ ಪ್ರಕರಣದಲ್ಲಿ, ಸಿಬಿಐ ಪ್ರಾಸಿಕ್ಯೂಟಿಂಗ್ ಏಜೆನ್ಸಿಯಾಗಿದ್ದು ಕೇಂದ್ರ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿಗಳು ನನ್ನ ವಿರುದ್ಧ ವಾದ ಮಂಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ಕುಟುಂಬದ ನಿಕಟ ಸದಸ್ಯರು ಕೇಂದ್ರ ಸರ್ಕಾರದ ವಕೀಲರ ಪಟ್ಟಿಯಲ್ಲಿ ಅನೇಕ ಸಕ್ರಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಅದೇ ಕಾನೂನು ಸಂಸ್ಥೆ ಮತ್ತು ಕಾನೂನು ಅಧಿಕಾರಿಯ ಮೂಲಕ ಸರ್ಕಾರದ ಕೆಲಸಗಳನ್ನು ಪಡೆಯುತ್ತಿರುವುದು ನನ್ನ ಆತಂಕಕ್ಕೆ ಕಾರಣವಾಗಿದೆ’ ಎಂದು ಏಪ್ರಿಲ್ 14 ರಂದು ಸಲ್ಲಿಸಿದ ಅಫಿಡವಿಟ್ ನಲ್ಲಿ ಪ್ರತಿಪಾದಿಸಲಾಗಿದೆ. ಆರ್ಟಿಐ ಮೂಲಕ ಪಡೆದ ಮಾಹಿತಿ ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳನ್ನು ಕೇಜ್ರವಾಲ್ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಮೂರ್ತಿ ಶರ್ಮಾ ಅವರ ಪುತ್ರನಿಗೆ ಗಣನೀಯ ಪ್ರಮಾಣದ ಕಾನೂನು ಕೆಲಸಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನ್ಯಾಯಮೂರ್ತಿಗಳ ಪುತ್ರನಿಗೆ 2023ರಲ್ಲಿ ಒಟ್ಟು 2,487, 2024ರಲ್ಲಿ 1,784, 2025ರಲ್ಲಿ 1,633 ಪ್ರಕರಣಗಳನ್ನು ನೀಡಲಾಗಿತ್ತು ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಸಾಲಿಸಿಟರ್ ಜನರಲ್ ಮೂಲಕ ಮಕ್ಕಳಿಗೆ ವೃತ್ತಿಪರ ಕೆಲಸ ಸಿಗುತ್ತಿರುವುದರಿಂದ, ನ್ಯಾಯಮೂರ್ತಿಗಳು ನಿಷ್ಪಕ್ಷಪಾತವಾಗಿ ತೀರ್ಪು ನೀಡಲು ಸಾಧ್ಯವಿಲ್ಲ ಎಂಬ ‘ಸಮಂಜಸವಾದ ಆತಂಕ ಉಂಟಾಗಿದೆ. ಈ ಹೊಸ ವಿಚಾರಗಳ ಬಗ್ಗೆ ವಾದ ಮಂಡಿಸಲು ತಮಗೆ ಹೆಚ್ಚಿನ ಸಮಯ ನೀಡಬೇಕು ಮತ್ತು ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಕೇಜ್ರಿವಾಲ್ ಅವರು ವಿನಂತಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
