ಪೊಲೀಸರು ಸಮನ್ಸ್ ಜಾರಿಗೆ ವಿದ್ಯುನ್ಮಾನ ತಂತ್ರಜ್ಞಾನ ಬಳಕೆ ಮಾಡುವಂತಿಲ್ಲ – ಸುಪ್ರೀಂಕೋರ್ಟ್
ನವದೆಹಲಿ: ಪೊಲೀಸರು ಆರೋಪಿಗೆ ಸಮನ್ಸ್ ಜಾರಿಗೊಳಿಸಲು ವಿದ್ಯುನ್ಮಾನ ತಂತ್ರಜ್ಞಾನ ಬಳಕೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದ್ದು, ಯಾವುದೇ ಆರೋಪಿಗೆ ಪೊಲೀಸರು ತಮ್ಮ ಸಮಕ್ಷಮ ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ಜಾರಿಗೊಳಿಸಲು ವಿದ್ಯುನ್ಮಾನ ತಂತ್ರಜ್ಞಾನವನ್ನು ಬಳಕೆ ಮಾಡುವಂತಿಲ್ಲ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 35ರ ಪ್ರಕಾರ, ಆರೋಪಿಗೆ ತಮ್ಮ ಮುಂದೆ ಹಾಜರಾಗಲು ಪೊಲೀಸರು ಅಥವಾ ಯಾವುದೇ ತನಿಖಾ ಸಂಸ್ಥೆಯು ವಾಟ್ಸ್ ಆಪ್ ಅಥವಾ ಯಾವುದೇ ವಿದ್ಯುನ್ಮಾನ ತಂತ್ರಜ್ಞಾನದ ಮುಖಾಂತರ ನೋಟೀಸ್ ಜಾರಿಗೊಳಿಸುವಂತಿಲ್ಲ ಎಂದು ತೀರ್ಪು ಹೊರಡಿಸಿದೆ.
ಪ್ರಕರಣದಲ್ಲಿ ತನಿಖಾಧಿಕಾರಿಯು ವಾಟ್ಸಾಪ್ ಮೂಲಕ ನೋಟೀಸ್ ಜಾರಿಗೊಳಿಸಿದ್ದು, ವಿಚಾರಣೆಗೆ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಅರ್ಜಿದಾರರು ಹಾಜರಾಗದೆ ಗೈರಾಗಿದ್ದರು. ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ಹಾಜರಾದ ವಕೀಲ ಸಿದ್ಧಾರ್ಥ್ ಲೂಥಾ ಅವರು, ಸಿಆರ್ಪಿಸಿಯ ಸೆಕ್ಷನ್ 41-ಂ ಅಥವಾ ಬಿಎನ್ಎಸ್ಎಸ್ನ ಸೆಕ್ಷನ್ 35ರ ಪ್ರಕಾರ ವೈಯಕ್ತಿಕವಾಗಿ, ಅಥವಾ ವಾಟ್ಸಾಪ್, ಇಮೇಲ್, ಎಸ್ಎಂಎಸ್ ಅಥವಾ ಇನ್ಯಾವುದೋ ಎಲೆಕ್ಟ್ರಾನಿಕಲ್ ಮಾದರಿ ಮೂಲಕ ನೋಟೀಸ್ ಜಾರಿಗೊಳಿಸಬಹುದು ಎಂಬ ಹರ್ಯಾಣ ಪೊಲೀಸ್ ಮಹಾನಿರ್ದೇಶಕರ ನಿಲುವಾದೇಶದ ಬಗ್ಗೆ ನ್ಯಾಯಪೀಠದ ಗಮನಸೆಳೆದರು.
“ಸತೇಂದರ್ ಕುಮಾರ್ ಅಂಟಿಲ್ ವಿರುದ್ಧ ಸಿಬಿಐ ಮತ್ತೊಬ್ಬರು ” (2022) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ವಕೀಲರು, ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕ ನೋಟೀಸ್ ಜಾರಿಗೊಳಿಸುವುದನ್ನು ಬಿಎನ್ಎಸ್ಎಸ್ ಸೆಕ್ಷನ್ 35 ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
