07/03/2026

Law Guide Kannada

Online Guide

ನಗದು ಪತ್ತೆ ಕೇಸ್, ನ್ಯಾ.ವರ್ಮಾ ಗೆ ವಾಗ್ದಂಡನೆ : ಸಲಹೆಗಾರರಾಗಿ ಇಬ್ಬರು ವಕೀಲರ ನೇಮಕ

ನವದೆಹಲಿ: ತಮ್ಮ ದೆಹಲಿ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಗೆ ವಾಗ್ದಂಡನೆ ವಿಧಿಸಲು ಪ್ರಕ್ರಿಯೆ ಆರಂಭವಾಗಿದ್ದು ಈ ಮಧ್ಯೆ ತನಿಖೆ ಮಾಡಲು ರಚಿಸಲಾದ ಸಮಿತಿಗೆ ಸಹಾಯ ಮಾಡುವುದಕ್ಕಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಇಬ್ಬರು ವಕೀಲರನ್ನ ನೇಮಕ ಮಾಡಿಕೊಂಡಿದ್ದಾರೆ.

ಲೋಕಸಭಾ ಸಚಿವಾಲಯ ಸೆಪ್ಟೆಂಬರ್ 19ರಂದು ಹೊರಡಿಸಿದ ಆದೇಶದ ಪ್ರಕಾರ. ನ್ಯಾಯಮೂರ್ತಿ ವರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ಚಿಂತನೆ ನಡೆಸುತ್ತಿರುವ ಆಧಾರದ ಮೇಲೆ ಸಮಿತಿಗೆ ಸಹಾಯ ಮಾಡಲು ವಕೀಲರಾದ ರೋಹನ್ ಸಿಂಗ್ ಮತ್ತು ಸಮೀಕ್ಷಾ ದುವಾ ಅವರನ್ನು ನೇಮಿಸಲಾಗಿದೆ.
ನ್ಯಾ. ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ನಗದು ಪತ್ತೆಯಾದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆಗಸ್ಟ್ 12ರಂದು ಸಮಿತಿ ರಚಿಸುವ ಮೂಲಕ ಸ್ಪೀಕರ್ ಅವರು ನ್ಯಾ. ವರ್ಮಾ ಅವರನ್ನು ಹುದ್ದೆಯಿಂದ ತೆಗೆದು ಹಾಕುವ ಪ್ರಕ್ರಿಯೆ ಆರಂಭಿಸಿದ್ದರು. ಸುಪ್ರೀಂ ಕೋರ್ಟ್ ರಚಿಸಿದ ಆಂತರಿಕ ಸಮಿತಿ ಈ ಹಿಂದೆ ನ್ಯಾ. ವರ್ಮಾ ಅವರ ವಿರುದ್ಧ ದೋಷಾರೋಪ ವರದಿ ಮಾಡಿ ಅವರನ್ನು ಪದಚ್ಯುತಗೊಳಿಸಲು ಶಿಫಾರಸು ಮಾಡಿತ್ತು. ಹಾಲಿ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಶಿಫಾರಸು ಮಾಡಬಹುದಾದರೂ ಅವರಿಗೆ ವಾಗ್ದಂಡನೆ ವಿಧಿಸುವ ಅಧಿಕಾರ ಸಂಸತ್ತಿಗೆ ಮಾತ್ರವೇ ಇರುತ್ತದೆ. ಬಳಿಕ
ಕೇಂದ್ರ ಸರ್ಕಾರ ಪ್ರಸ್ತುತ ಅಲಾಹಾಬಾದ್ ಹೈಕೋರ್ಟ್ ನಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾ. ವರ್ಮಾ ಅವರಿಗೆ ವಾಗ್ದಂಡನೆ ವಿಧಿಸುವುದಕ್ಕಾಗಿ ಸಂಸತ್ತಿನಲ್ಲಿ ಪ್ರಸ್ತಾವನೆ ಮಂಡಿಸಲಾಗಿತ್ತು. ಪ್ರಸ್ತಾವನೆಗೆ 146 ಸಂಸತ್ ಸದಸ್ಯರು ಸಹಿ ಮಾಡಿದ್ದರು. ಬಳಿಕ ಈ ನಿರ್ಣಯವನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕಾರ ಮಾಢಿದ್ದರು.

ಇದಾದ ಬಳಿಕ ನ್ಯಾಯಾಧೀಶರ (ವಿಚಾರಣಾ) ಕಾಯಿದೆಯಡಿ, ಘಟನೆಯ ತನಿಖೆಗಾಗಿ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕ ಮೂಲದ ಹಿರಿಯ ವಕೀಲ ಬಿ ವಾಸುದೇವ ಆಚಾರ್ಯ ಅವರನ್ನು ಒಳಗೊಂಡ ಸಮಿತಿಯನ್ನ ಸ್ಪೀಕರ್ ಓಂ ಬಿರ್ಲಾ ಅವರು ರಚಿಸಿದ್ದರು. ಇದೀಗ ಈ ಸಮಿತಿಗೆ ಸಲಹೆ ನೀಡುವ ಸಲುವಾಗಿ ಇಬ್ಬರು ವಕೀಲರನ್ನ ನೇಮಕ ಮಾಡಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.