23/04/2026

Law Guide Kannada

Online Guide

ಹೆಚ್ಚುತ್ತಿರುವ ಬಾಕಿ ಪ್ರಕರಣಗಳ ನಿಯಂತ್ರಣಕ್ಕೆ ನ್ಯಾಯಾಂಗ ಸುಧಾರಣಾ ಆಯೋಗ ಅವಶ್ಯಕ-ನ್ಯಾ. ಬಿ.ವಿ.ನಾಗರತ್ನ

ಬೆಂಗಳೂರು: ‘ನ್ಯಾಯದಾನ ನೀಡುವಲ್ಲಿ ವಿಳಂಬವಾಗುತ್ತಿದ್ದು ‘ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನು ನಿಯಂತ್ರಿಸಲು ‘ನ್ಯಾಯಾಂಗ ಸುಧಾರಣಾ ಆಯೋಗ’ ರಚನೆ ಮಾಡುವುದು ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ತಿಳಿಸಿದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ) ‘ನ್ಯಾಯಾಂಗ ಆಡಳಿತದ ಮರುಕಲ್ಪನೆ; ಪ್ರಜಾಸತ್ತಾತ್ಮಕ ನ್ಯಾಯಕ್ಕಾಗಿ ಸಂಸ್ಥೆಗಳ ಸದೃಢೀಕರಣ’ ವಿಷಯ ಕುರಿತು ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ ಸಮ್ಮೇಳನದಲ್ಲಿ ಬಾಕಿ ಪ್ರಕರಣಗಳ ಕುರಿತಂತೆ ಮಾತನಾಡಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ, ‘ನ್ಯಾಯದಾನ ನೀಡುವಲ್ಲಿ ಆಗುತ್ತಿರುವ ವಿಳಂಬಕ್ಕೆ ಸರ್ಕಾರ ಸೇರಿದಂತೆ ಎಲ್ಲರ ಕೊಡುಗೆಯೂ ಇದ್ದು ಇದರ ಸುಧಾರಣೆಗೆ ಆಯೋಗವೊಂದನ್ನು ರಚಿಸಿವ ಅವಶ್ಯಕತೆ ಇದೆ. ಇದು ರಜೆ ಪಡೆಯಲೂ ಆಗದಂತಹ ನ್ಯಾಯಾಧೀಶರ ಮೇಲಿನ ಒತ್ತಡಗಳನ್ನು ತಗ್ಗಿಸುತ್ತದೆ’ ಎಂದು ತಿಳಿಸಿದರು.

‘ಸುಧಾರಣಾ ಆಯೋಗದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳ ಸದಸ್ಯರು ಮಾತ್ರವಲ್ಲ, ಬಾರ್ ಅಸೋಸಿಯೇಷನ್, ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್, ವಕೀಲರ ಪರಿಷತ್ತುಗಳ ಅಧ್ಯಕ್ಷರೂ ಸದಸ್ಯರಾಗಬೇಕು. ಸರ್ಕಾರದ ಪ್ರತಿನಿಧಿತ್ವ ಇರಬೇಕು. ಆಗ ಪರಸ್ಪರ ಚರ್ಚೆಯಿಂದ ಬಾಕಿ ಪ್ರಕರಣಗಳ ಇತ್ಯರ್ಥ ಬೇಗ ಆಗಲಿದೆ. ‘ಸರ್ಕಾರವೇ ದೊಡ್ಡ ಸಂಖ್ಯೆಯ ವ್ಯಾಜ್ಯ ಪ್ರಕರಣಗಳ ಜನಕ ಎನಿಸಿಕೊಳ್ಳುತ್ತಿದೆ. ಆರಂಭದಲ್ಲೇ ಇತ್ಯರ್ಥ ಮಾಡಬಹುದಾದರೂ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಮೇಲ್ಮನವಿ ಹಾಕುತ್ತಾರೆ. ಹೀಗಾಗಿ ಪ್ರಕರಣ ಅನಗತ್ಯವಾಗಿ ನ್ಯಾಯಾಂಗ ಪ್ರಕ್ರಿಯೆಯ ಹಲವು ಹಂತಗಳನ್ನು ದಾಟುತ್ತದೆ’ ಎಂದು ನಾಗರತ್ನ ಅವರು ಬೇಸರ ವ್ಯಕ್ತಪಡಿಸಿದರು.

ನ್ಯಾಯಾಧೀಶರ ನೇಮಕಾತಿಗಳಲ್ಲಿ ವಿಳಂಬ, ಮೂಲಸೌಕರ್ಯ ಕೊರತೆ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸದಿರುವುದೂ ಸೇರಿ ಅನೇಕ ಸಮಸ್ಯೆಗಳೂ ಇವೆ. ಪ್ರಕರಣಗಳ ನಿರ್ವಹಣೆ, ಅನಗತ್ಯ ಮುಂದೂಡಿಕೆ ನಿಯಂತ್ರಣ, ತಂತ್ರಜ್ಞಾನದ ಅಳವಡಿಕೆ, ಆದ್ಯತೆ ಮೇಲೆ ಪ್ರಕರಣ ಕೈಗೆತ್ತಿಕೊಳ್ಳುವುದು, ವಿವಾದ ಇತ್ಯರ್ಥಕ್ಕೆ ಪರ್ಯಾಯ ಮಾರ್ಗ ಹುಡುಕುವುದು, ವಿಷಯ ತಜ್ಞ ಪೀಠಗಳ ರಚನೆಯಿಂದ ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥ ಸಾಧ್ಯವಿದೆ’ ಎಂದು ಬಿ.ವಿ ನಾಗರತ್ನ ಅವರು ತಿಳಿಸಿದರು.

ಕಕ್ಷಿದಾರರು ಅನಗತ್ಯ ದಾವೆ ಹೂಡಬಾರದು, ಸರ್ಕಾರ ವಾಸ್ತವ ವ್ಯಾಜ್ಯ ನೀತಿಯನ್ನು ಅಳವಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ನ್ಯಾಯಾಂಗಕ್ಕೆ ಅನುದಾನ ನೀಡಿ. ನೇಮಕಾತಿಗಳನ್ನು ಮಾಡಬೇಕು. ವಕೀಲರು ವೃತ್ತಿಪರತೆ ಮತ್ತು ನೈತಿಕ ಬದ್ಧತೆ ಪಾಲಿಸಬೇಕು ಎಂದು ಅವರು ಬಿ.ವಿ ನಾಗರತ್ನ ಅವರು ಸಲಹೆ ನೀಡಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.