ತಮ್ಮನ್ನು ‘ಸೂಪರ್ ಸಿಜೆಐ’ ಎಂದು ಭಾವಿಸಿದ್ದಾರೆ: ತನ್ನದೇ ರಿಜಿಸ್ಟ್ರಿಗೆ ಕ್ಲಾಸ್ ತೆಗೆದುಕೊಂಡ ಸುಪ್ರೀಂ
ನವದೆಹಲಿ: ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡದ್ದ ಹಿನ್ನೆಲೆಯಲ್ಲಿ ತನ್ನದೇ ರಿಜಿಸ್ಟ್ರಿ ವಿರುದ್ದ ಸುಪ್ರೀಂಕೋರ್ಟ್ ಅಪರೂಪದ ಮತ್ತು ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ.
ರಿಜಿಸ್ಟ್ರಿ ಅದರ ವರ್ತನೆಯು ಅಶಿಸ್ತಿನಿಂದ ಕೂಡಿದೆ ಮತ್ತು ಅದರ ಅಧಿಕಾರಿಗಳು ತಮ್ಮನ್ನು ‘ಸೂಪರ್ ಚೀಫ್ ಜಸ್ಟೀಸ್ ಆಫ್ ಇಂಡಿಯಾ’ ಎಂದು ಭಾವಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದೆ. ಸುಮಾರು 37,000 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಹೂಡಿಕೆ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಆಯುಷಿ ಮಿತ್ತಲ್ ಅಲಿಯಾಸ್ ಆಯುಷಿ ಅಗರ್ವಾಲ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ)ಸೂರ್ಯಕಾಂತ ಮತ್ತು ನ್ಯಾ. ಜಾಯಮಾಲ್ಯ ಬಾಗ್ಚಿ ಅವರ ಪೀಠವು ಈ ರೀತಿಯಾಗಿ ತನ್ನದೇ ರಿಜಿಸ್ಟ್ರಿಗೆ ಕ್ಲಾಸ್ ತೆಗೆದುಕೊಂಡಿದೆ.
ಅರ್ಜಿಗೆ ಸಂಬಂಧಿಸಿದಂತೆ ಮಾ.23ರಂದು ಹೊರಡಿಸಲಾಗಿದ್ದ ಆದೇಶವನ್ನು ಉಲ್ಲೇಖಿಸಿದ ಸಿಜೆಐ, ಪೀಠವು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್ ಹೊರಡಿಸಿಲ್ಲ ಎಂದು ರಿಜಿಸ್ಟ್ರಿ ಅಧಿಕಾರಿಗಳು ಹೇಗೆ ಅರ್ಥೈಸಿಕೊಂಡಿದ್ದರು ಎಂದು ಪ್ರಶ್ನಿಸಿದರು. ಅಲ್ಲದೆ ರಿಜಿಸ್ಟ್ರಿ ತುಂಬ ಅಶಿಸ್ತಿನಿಂದ ವರ್ತಿಸುತ್ತಿದೆ, ಅಲ್ಲಿ ಕುಳಿತಿರುವ ಪ್ರತಿಯೊಬ್ಬರೂ ತಮ್ಮನ್ನು ಸೂಪರ್ ಸಿಜೆಐ ಎಂದು ಭಾವಿಸಿದ್ದಾರೆ ಎಂದು ನ್ಯಾ ಸೂರ್ಯಕಾಂತ ಚಾಟಿ ಬೀಸಿದರು.
ಇಡಿ.ಗೆ ನೋಟಿಸ್ ಹೊರಡಿಸುವಂತೆ ಆದೇಶವಿರಲಿಲ್ಲ ಎಂಬ ಕಾರಣ ನೀಡಿ ಅದರ ನಿರ್ದೇಶಕರಿಗೆ ನೋಟಿಸ್ ನೀಡಲಾಗಿಲ್ಲ. ನಮ್ಮ ಮಾ.23ರ ಆದೇಶದ ಅರ್ಥವು ಇಡಿಗೆ ನೋಟಿಸ್ ಹೊರಡಿಸುವುದಾಗಿರಲಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದು ಹೇಗೆ ಎಂಬ ಬಗ್ಗೆ ರಿಜಿಸ್ಟ್ರಾರ್ ಜ್ಯುಡಿಷಿಯಲ್ ಅವರಿಂದ ಸತ್ಯಶೋಧನಾ ವಿಚಾರಣೆ ನಡೆಯಲಿ. ಇಡಿಗೆ ನೋಟಿಸ್ ಹೊರಡಿಸಲಿ ಎಂದು ನ್ಯಾಯಪೀಠವು ತನ್ನ ಹೊಸ ಆದೇಶ ಹೊರಡಿಸಿತು.
ಅರ್ಜಿದಾರರಾದ ಆಯುಷಿ ಮಿತ್ತಲ್, ಅವರ ಪತಿ ಮತ್ತು ಅವರ ಕಂಪನಿ ಬೃಹತ್ ಹೂಡಿಕೆ ವಂಚನೆ ಆರೋಪ ಎದುರಿಸುತ್ತಿದ್ದು, ಹೂಡಿಕೆದಾರರಿಗೆ ಅವರ ಹೂಡಿಕೆಯ ಹೆಚ್ಚಿನ ಭಾಗವನ್ನು ಮರಳಿಸಲಾಗಿದೆ. ಹಲವಾರು ನೂರು ಕೋಟಿ ರೂ.ಗಳು ಇ ಬ್ಯಾಂಕ್ ಖಾತೆಗಳಲ್ಲಿದ್ದು,ಅದನ್ನು ಪ್ರಸ್ತುತ ಇಡಿ ಸ್ಥಗಿತಗೊಳಿಸಿದೆ ಎಂದು ಆರೋಪಿಗಳ ಪರ ವಕೀಲರು ತಿಳಿಸಿದರು.
ಪ್ರಕರಣದಲ್ಲಿ ಕಕ್ಷಿಯಾಗಿರುವ ರಾಜಸ್ಥಾನ ಸರಕಾರದ ವಕೀಲರ ಮೌಖಿಕ ಮನವಿಯ ಮೇರೆಗೆ ಇಡಿ.ಯನ್ನೂ ಕಕ್ಷಿಯಾಗಿ ಸೇರಿಸಲು ತನ್ನ ಮಾ.23ರ ಆದೇಶದಲ್ಲಿ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಅರ್ಜಿದಾರರು ಮತ್ತು ಅವರ ವಿಸ್ತ್ರತ ಕುಟುಂಬದ ಎಲ್ಲ ಸ್ಥಿರ ಮತ್ತು ಚರಾಸ್ತಿಗಳನ್ನು ಸೂಕ್ತವಾಗಿ ಜಪ್ತಿ ಮಾಡಲಾಗಿದೆಯೇ ಎನ್ನುವುದನ್ನು ನಿರ್ಧರಿಸುವುದು ಈ ಕ್ರಮದ ಉದ್ದೇಶವಾಗಿತ್ತು. ಸಂಪೂರ್ಣ ಆಸ್ತಿ ವಿವರಗಳನ್ನು ಸಲ್ಲಿಸುವವರೆಗೆ ಜಾಮೀನು ಅರ್ಜಿಯ ಅರ್ಹತೆಯನ್ನು ತಾನು ಪರಿಗಣಿಸುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.
ನ್ಯಾಯಾಲಯದ ಹಿಂದಿನ ಸೂಚನೆಗಳನ್ನು ಏಕೆ ಕಡೆಗಣಿಸಲಾಗಿತ್ತು ಎನ್ನುವುದನ್ನು ಕಂಡುಕೊಳ್ಳಲು ರಿಜಿಸ್ಟಿಯೊಳಗಿನ ಆಡಳಿತಾತ್ಮಕ ಲೋಪದ ಕುರಿತು ತನಿಖೆ ನಡೆಸುವ ಹೊಣೆಗಾರಿಕೆಯನ್ನು ರಿಜಿಸ್ಟ್ರಾರ್ ಜ್ಯುಡಿಷಿಯಲ್ ಗೆ ವಹಿಸಿದ ನ್ಯಾಯಪೀಠವು,ಅರ್ಜಿಯನ್ನು ಇದೇ ತಿಂಗಳಿನಲ್ಲಿ ಮತ್ತೆ ವಿಚಾರಣೆಗೆ ಪಟ್ಟಿ ಮಾಡುವುದಾಗಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
