ಮರದ ಕೊಂಬೆ ಬಿದ್ದು ಗಂಭೀರ ಗಾಯ, ಪಾರ್ಶ್ವವಾಯು: ವ್ಯಕ್ತಿಗೆ 25 ಲಕ್ಷ ರೂ. ಪರಿಹಾರಕ್ಕೆ ಸುಪ್ರೀಂ ಆದೇಶ
ನವದೆಹಲಿ: ಭಾರೀ ಮಳೆಗೆ ಆಟೊರಿಕ್ಷಾ ಮೇಲೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡು, ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿಗೆ ಹೈಕೋರ್ಟ್ ನೀಡಿದ್ದ ಪರಿಹಾರ ಮೊತ್ತವನ್ನು 17.10 ಲಕ್ಷ ರೂ.ನಿಂದ ₹25 ಲಕ್ಷಕ್ಕೆ ಹೆಚ್ಚಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರಿನಲ್ಲಿ 19 ವರ್ಷಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಆಟೊರಿಕ್ಷಾ ಮೇಲೆ ಮರದ ಕೊಂಬೆ ಬಿದ್ದು ಕೆ.ಕೆ ಉಮೇಶ್ ಕುಮಾರ್ ಎಂಬುವವರು ಗಂಭೀರವಾಗಿ ಗಾಯಗೊಂಡು, ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಹೈಕೋರ್ಟ್ ನೀಡಿದ್ದ ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಿ ಕೆ.ಕೆ ಉಮೇಶ್ ಕುಮಾರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು, ಇಂತಹ ಪ್ರಕರಣದಲ್ಲಿ ವಿಶೇಷವಾಗಿ ಸ್ಥಳೀಯ ಸಂಸ್ಥೆಯ ವಿರುದ್ಧ ಮೋಟಾರು ವಾಹನ ಕಾಯ್ದೆಯ (ಎಂವಿಎ) ಸೆಕ್ಷನ್ 166ರ ಅಡಿಯಲ್ಲಿ ಪರಿಹಾರ ಕೋರಿ ಹಕ್ಕು ಸಲ್ಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಸಂವಿಧಾನದ 142ನೇ ವಿಧಿ ಅಡಿಯಲ್ಲಿನ ವಿಶೇಷ ಅಧಿಕಾರ ಬಳಸಿಕೊಂಡು, ವ್ಯಕ್ತಿಗೆ ಹೈಕೋರ್ಟ್ ನೀಡಿದ್ದ ಪರಿಹಾರ ಮೊತ್ತವನ್ನು ₹17.10 ಲಕ್ಷದಿಂದ ₹25 ಲಕ್ಷಕ್ಕೆ ಹೆಚ್ಚಿಸಿ ತೀರ್ಪು ನೀಡಿತು.
ಘಟನೆ ವಿವರ
2007ರಲ್ಲಿ ಕೆ.ಕೆ ಉಮೇಶ್ ಕುಮಾರ್ ಎಂಬುವರು ಆಟೊದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಭಾರಿ ಮಳೆಯ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಚಾಲಕ ಆಟೊ ನಿಲ್ಲಿಸಿದ್ದರು. ಆಗ ಆಟೊ ಮೇಲೆ ಮರದ ಕೊಂಬೆ ಬಿದ್ದು, ಉಮೇಶ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು.
ಬಿಬಿಎಂಪಿ ಆಯುಕ್ತರನ್ನು ಹೊಣೆಗಾರರನ್ನಾಗಿ ಮಾಡಿ, 50 ಲಕ್ಷ ರೂ. ಪರಿಹಾರ ಕೋರಿ ಉಮೇಶ್ಕುಮಾರ್ ಸಲ್ಲಿಸಿದ್ದ ಮನವಿಯನ್ನು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ತಿರಸ್ಕರಿಸಿತ್ತು. ಇದು ನೈಸರ್ಗಿಕ ವಿಕೋಪದಿಂದ ಅಥವಾ ದೇವರ ಕೃತ್ಯದಿಂದ ಆದ ಘಟನೆ ಎಂದು ಹೇಳಿತ್ತು. ವಿಳಂಬ ಕಾರಣಕ್ಕೆ ಹೈಕೋರ್ಟ್ ಅರ್ಜಿಯನ್ನು ವಿಚಾರಣೆ ನಡೆಸಲು ಮೊದಲು ನಿರಾಕರಿಸಿದರೂ, ನಂತರ ಸುಪ್ರೀಂಕೊರ್ಟ್ ಸೂಚನೆಯಂತೆ ಮರು ವಿಚಾರಣೆ ನಡೆಸಿ ₹ 17 ಲಕ್ಷ ಪರಿಹಾರ ನೀಡಿ ಆದೇಶಿಸಿತ್ತು. ಅರ್ಜಿದಾರರು ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
