16/07/2026

Law Guide Kannada

Online Guide

ಪಿತ್ರಾರ್ಜಿತ ಕೃಷಿ ಜಮೀನು ಖರೀದಿಸಲು ಕುಟುಂಬವರಿಗೆ ಆದ್ಯತೆ ಇದೆಯೇ..? ತೀರ್ಪಿನಲ್ಲಿ ಸ್ಪಷ್ಟಪಡಿಸಿದ ಸುಪ್ರೀಂ

ನವದೆಹಲಿ: ಪಿತ್ರಾರ್ಜಿತ ಕೃಷಿ ಜಮೀನಿನಲ್ಲಿ ‘ಸದಸ್ಯರೊಬ್ಬರು ತಮ್ಮ ಪಾಲನ್ನು ಮಾರಾಟ ಮಾಡಲು ಬಯಸಿದರೆ, ಅದನ್ನು ಖರೀದಿಸಲು ಕುಟುಂಬದ ನಿಕಟ ಸದಸ್ಯರಿಗೆ ಆದ್ಯತೆ ಇರುತ್ತದೆ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 22ರ ವ್ಯಾಪ್ತಿಯಿಂದ ಕೃಷಿ ಜಮೀನನ್ನು ಹೊರಗಿಡುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರ ಪೀಠವು ಅರ್ಜಿಯನ್ನು ವಜಾಗೊಳಿಸಿ ಪಿತ್ರಾರ್ಜಿತ ಕೃಷಿ ಜಮೀನನ್ನು ಮಾರಾಟ ಮಾಡಲು ಮುಂದಾದಾಗ, ಹೊರಗಿನವರಿಗೆ ಮಾರುವ ಮೊದಲು ಕುಟುಂಬದ ಇತರ ವರ್ಗ-1 ವಾರಸುದಾರರಿಗೆ (ಉದಾಹರಣೆಗೆ: ಪತ್ನಿ, ಮಕ್ಕಳು, ತಾಯಿ) ಅದನ್ನು ಖರೀದಿಸಲು ಮೊದಲ ಅವಕಾಶ ನೀಡಬೇಕು ಎಂದಿದೆ.

ವರ್ಗ -I ಉತ್ತರಾಧಿಕಾರಿಗಳ (ಸಂಗಾತಿ, ಮಕ್ಕಳು, ತಾಯಿ ಸೇರಿ ಕುಟುಂಬದ ನಿಕಟ ಸದಸ್ಯರು) ಆದ್ಯತೆಯ ಹಕ್ಕು ಕೃಷಿ ಜಮೀನಿಗೂ ವಿಸ್ತರಿಸುತ್ತದೆ. ಆಸ್ತಿಯಲ್ಲಿ ತಮ್ಮ ಹಕ್ಕನ್ನು ವರ್ಗಾಯಿಸಲು ಉದ್ದೇಶಿಸಿರುವ ಸಹ-ಉತ್ತರಾಧಿಕಾರಿಯ ಪಾಲನ್ನು ಪಡೆಯಲು ಇವರಿಗೆ ಆದ್ಯತೆ ಇರುತ್ತದೆ. ಕೃಷಿ ಜಮೀನನ್ನು ಸೆಕ್ಷನ್ 22ರ ವ್ಯಾಪ್ತಿಯಿಂದ ಹೊರಗಿಡಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕುಟುಂಬ ಹಿಡುವಳಿಗಳ ವಿಭಜನೆ ಮತ್ತು ಹೊರಗಿನವರ ಒಳನುಗ್ಗುವಿಕೆ ತಡೆಗಟ್ಟುವುದು ಸೆಕ್ಷನ್ 22ರ ಉದ್ದೇಶವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.