18/07/2026

Law Guide Kannada

Online Guide

ಸಂಪ್ ನಲ್ಲಿ ಬಿದ್ದು ಮಗು ಸಾವು ಪ್ರಕರಣ: ಪರಿಹಾರಕ್ಕೆ ಸಮ್ಮತಿ: ಮಾನವೀಯ ಕಾಳಜಿ ವ್ಯಕ್ತಪಡಿಸಿದ ಹೈಕೋರ್ಟ್

ಬೆಂಗಳೂರು: ಸಂಪ್ ನಲ್ಲಿ ಬಿದ್ದು ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಮಾಲೀಕರು ಪರಿಹಾರ ನೀಡಲು ಒಪ್ಪಿದ್ದು ಉಭಯ ಪಕ್ಷಗಾರರು ಸಹಮತದ ಆಧಾರದಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಳ್ಳುವ ಮನವಿಗೆ ಹೈಕೋರ್ಟ್ ಅಸ್ತು ಎಂದಿದೆ.

ಮೂರು ವರ್ಷದ ಗಂಡು ಮಗುವೊಂದು ಆಟವಾಡುತ್ತಾ ನೀರಿನ ಸಂಪ್ ನಲ್ಲಿ ಬಿದ್ದು ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿತರಾದ ಮನೆಯ ಮಾಲೀಕರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ‘ನ್ಯಾಯಾಲಯಗಳು ಎಂದರೆ ಕೇವಲ ವ್ಯಕ್ತಿ-ವ್ಯಕ್ತಿಗಳು ಅಥವಾ ಸರ್ಕಾರಗಳ ನಡುವಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಚಾವಡಿಗಳಲ್ಲ. ಕೆಲವೊಮ್ಮೆ ಅವು ದುಃಖಿತರ ಪಾಲಿಗೆ ಸಮಾನತೆಯನ್ನು ಕರುಣಿಸುವ ಮೌನ ಸಂರಕ್ಷಕನೂ ಆಗುತ್ತವೆ’ ಎಂದು ಬಣ್ಣಿಸಿದೆ.

ಕಳೆದುಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ ಮತ್ತು ಅದಕ್ಕೆ ಬೆಲೆ ಕಟ್ಟಲೂ ಆಗದು. ದುರಂತವೇ ಮೈವೆತ್ತ ಕ್ರಿಮಿನಲ್ ಪ್ರಕರಣಗಳಲ್ಲಿ ಪರಿಹಾರವನ್ನು ಪರಿಗಣಿಸುವಾಗ ಹಣ ಗೌಣವಾಗುತ್ತದೆ’ ಎಂಬ ಮಾನವೀಯ ಕಾಳಜಿಯನ್ನು ವ್ಯಕ್ತಪಡಿಸಿದ ಹೈಕೋರ್ಟ್ ನ್ಯಾಯಪೀಠವು, ‘ಸಂತ್ರಸ್ತ ಕುಟುಂಬಗಳ ಸ್ಥಿತಿಗತಿ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಂಡು ನ್ಯಾಯಾಲಯಗಳು ಪ್ರಗತಿಪರ ಬಾಧ್ಯತೆಯ ಹೆಜ್ಜೆ ಇಡುವುದು ಅನಿವಾರ್ಯ ಎಂದು ತಿಳಿಸಿದರು.

ಹಾಗೆಯೇ ಪೋಷಕರಿಗೆ ಮುಂದಿನ ಹನ್ನೆರಡು ತಿಂಗಳವರೆಗೆ ಪ್ರತಿ ತಿಂಗಳು ₹10 ಸಾವಿರ ಪಾವತಿಯನ್ನು ಮುಂದುವರಿಸಲು ಒಪ್ಪಿಕೊಂಡಿರುವ ಅರ್ಜಿದಾರರ ಮುಚ್ಚಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠವು, ಈ ಮೊತ್ತದ ಹೊರತಾಗಿ ಪ್ರತ್ಯೇಕವಾಗಿ ನೀಡಲಾಗುತ್ತಿರುವ ₹5 ಲಕ್ಷ ಪರಿಹಾರಕ್ಕೆ ಪೋಷಕರ ಹೆಸರಿನಲ್ಲಿ ಸೂಕ್ತ ಖಾತೆಯನ್ನು ತೆರೆಯಬೇಕು. ನಂತರ, ಡಿಮ್ಯಾಂಡ್ ಡ್ರಾಫ್ಟ್ ಮೊತ್ತವನ್ನು ‘ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ’ಯಲ್ಲಿ ಹೂಡಿಕೆ ಮಾಡಬೇಕು’ ಎಂದು ನಿರ್ದೇಶನ ನೀಡಿದೆ.

‘ಈ ಯೋಜನೆಯಡಿ ಲಭ್ಯವಾಗುವ ಪ್ರತಿ ತಿಂಗಳ ಬಡ್ಡಿಯು ಐದು ವರ್ಷಗಳ ಅವಧಿಗೆ ನೇರವಾಗಿ ಪೋಷಕರಿಗೆ ಸಿಗುವಂತಾಗಬೇಕು. ಈ ಆವರ್ತಕ ಆದಾಯವನ್ನು ಬದುಕುಳಿದಿರುವ ಮಗ ಮತ್ತು ಮಗಳ ಕಲ್ಯಾಣ, ಶಿಕ್ಷಣ ಮತ್ತು ಪಾಲನೆ-ಪೋಷಣೆಗಾಗಿ ಮಾತ್ರವೇ ಬಳಸಬೇಕು. ಮಗಳು ಪ್ರಾಪ್ತ ವಯಸ್ಸಿಗೆ ಬಂದ ನಂತರ, ಕಾನೂನಿನ ಪ್ರಕಾರ ದೂರುದಾರರು ಆ ಹೂಡಿಕೆಯ ಹಣವನ್ನು ಹಿಂಪಡೆಯಲು ಅವಕಾಶವಿರುತ್ತದೆ’ ಎಂದು ನ್ಯಾಯಪೀಠ ತಿಳಿಸಿದೆ.

ಘಟನೆಯ ವಿವರ
2026ರ ಮೇ 27ರಂದು ಆರ್.ಆರ್.ಕೆಂಚೇನಹಳ್ಳಿಯ ಜನಪ್ರಿಯ ಲೇ ಔಟ್ನಲ್ಲಿರುವ ತ್ರಿಲೋಕ ವಿಲ್ಲಾಸ್ ಮತ್ತು ಅಪಾರ್ಟ್ಮೆಂಟ್ನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಸೋನು ಮಚವಾರ್ ಕುಟುಂಬದ ಮೂರು ವರ್ಷದ ಮಗ ಬೆಳಿಗ್ಗೆ 11 ಗಂಟೆಯಿಂದ ಕಾಣೆಯಾಗಿದ್ದ. ಬಳಿಕ ಹುಡುಕಾಡಿದಾಗ ಮಗು ಮಧ್ಯಾಹ್ನ 1.45 ಗಂಟೆಯಲ್ಲಿ ಶವವಾಗಿ ನೀರಿನ ಸಂಪ್ ನಲ್ಲಿ ಪತ್ತೆಯಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಪೋಷಕರು ಮನೆಯ ಮಾಲೀಕ ಅಭಿಷೇಕ್, ಮೇಸ್ತ್ರಿ ವೇಲು ಮತ್ತು ಗುತ್ತಿಗೆದಾರ ಅಲೋಕ್ ಸುಂದರ್ ವಿರುದ್ಧ ದೂರು ನೀಡಿದ್ದರು. ನಿರ್ಮಾಣ ಹಂತದ ಮನೆಯಲ್ಲಿ ಮುಂಜಾಗ್ರತ ಕ್ರಮ ವಹಿಸಿರಲಿಲ್ಲ. ಈ ಕಾರಣ ನನ್ನ ಮಗ ಸಾವನ್ನಪ್ಪಿದ್ದಾನೆ’ ಎಂದು ಆರೋಪಿಸಿದ್ದರು.

ಇದರ ಅನುಸಾರ ರಾಜರಾಜೇಶ್ವರಿ ನಗರ ಠಾಣೆಯ ಉಪವಿಭಾಗದ ಪೊಲೀಸರು; ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 106(1)ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿ ನಗರದ 46ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಪ್ರಕರಣವನ್ನು ರವಾನಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.