ಮಧ್ಯಸ್ಥಿಕೆ ತೀರ್ಪಿಗೆ ತಿದ್ದುಪಡಿ ಅಥವಾ ಪರಿಷ್ಕರಣೆ ಮಾಡುವ ಅಧಿಕಾರ ನ್ಯಾಯಾಲಯಕ್ಕಿಲ್ಲ – ಹೈಕೋರ್ಟ್
ಬೆಂಗಳೂರು: ನ್ಯಾಯಾಲಯಕ್ಕೆ ಮಧ್ಯಸ್ಥಿಕೆ ತೀರ್ಪಿನ್ನು ತಿದ್ದುಪಡಿ ಮಾಡುವ ಅಥವಾ ಪರಿಷ್ಕಣೆ ಮಾಡುವ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನ ಪ್ರಕರಣದಲ್ಲಿ, ಜಿಲ್ಲಾ ನ್ಯಾಯಾಲಯದ ಪರಿಷ್ಕೃತ ಪರಿಹಾರ ಆದೇಶ ರದ್ದು ಪಡಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್. ಸುನೀಲ್ ದತ್ ಯಾದವ್ ಹಾಗೂ ಕೆ.ಜಿ. ಶಾಂತಿ ಅವರಿದ್ದ ವಿಭಾಗೀಯ ಪೀಠವು, ಮಧ್ಯಸ್ಥಿಕೆ ಮತ್ತು ಸೌಹಾರ್ದ ಕಾಯ್ದೆ, 1996ರ ಸೆಕ್ಷನ್ 34ರ ಅಡಿಯಲ್ಲಿ ಅಧಿಕಾರ ಚಲಾಯಿಸುವ ನ್ಯಾಯಾಲಯವು ಮಧ್ಯಸ್ಥಿಕೆ ತೀರ್ಪನ್ನು ಪರಿಷ್ಕರಿಸಲು ಅಥವಾ ತಿದ್ದುಪಡಿ ಮಾಡಲು ಅಧಿಕಾರ ಹೊಂದಿಲ್ಲ. ಅದು ಮಧ್ಯಸ್ತರ ತೀರ್ಪನ್ನು ದೃಢೀಕರಿಸಬಹುದು, ರದ್ದುಗೊಳಿಸಬಹುದು ಅಥವಾ ಅಗತ್ಯವಿದ್ದರೆ ಮರುಪರಿಗಣನೆಗಾಗಿ ಮಧ್ಯಸ್ತರ ಬಳಿಗೆ ಹಿಂದಿರುಗಿಸಬಹುದು ಅಷ್ಟೇ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿದ ಪ್ರಕರಣದಲ್ಲಿ. ಮಧ್ಯಸ್ಥರ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸಿದ ಹಾವೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತನ್ನ ಹಿಂದಿನ ತೀರ್ಪನ್ನು ಮರುಪರಿಶೀಲಿಸಿ ಪರಿಹಾರದ ಮೊತ್ತವನ್ನು ಬದಲಾಯಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎನ್ಎಚ್ಎಐ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಪೀಠ ಪುರಸ್ಕರಿಸಿತು.
ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ಭೂಸ್ವಾಧೀನ ಮಾಡಲಾಗಿತ್ತು. ಸಂಬಂಧಿತ ಪ್ರಾಧಿಕಾರವು ಪರಿಹಾರ ನಿಗದಿಪಡಿಸಿದ ನಂತರ, ಭೂಮಾಲೀಕರು ಮಧ್ಯಸ್ಥರ ಮುಂದೆ ಹೆಚ್ಚಿನ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರು.
ಮಧ್ಯಸ್ಥರು ಪರಿಹಾರದ ಮೊತ್ತವನ್ನು ಹೆಚ್ಚಿಸಿದರು. ಇದನ್ನು ಪ್ರಶ್ನಿಸಿ ಎನ್ಎಚ್ಎಐ ಸೆಕ್ಷನ್ 34ರ ಅಡಿಯಲ್ಲಿ ಜಿಲ್ಲಾ ನ್ಯಾಯಾಲಯ ಮೊರೆ ಹೋಯಿತು.. ಆರಂಭದಲ್ಲಿ ಜಿಲ್ಲಾ ನ್ಯಾಯಾಲಯವು ಮಧ್ಯಸ್ಥರ ತೀರ್ಪನ್ನು ಯಥಾಸ್ಥಿತಿಯಲ್ಲಿ ದೃಢೀಕರಿಸಿತು. ನಂತರ ಭೂಮಾಲೀಕರು ಅದೇ ನ್ಯಾಯಾಲಯದಲ್ಲಿ ಮರುಪರಿಶೀಲನಾ (Review) ಅರ್ಜಿಗಳನ್ನು ಸಲ್ಲಿಸಿದರು. ಅವುಗಳನ್ನು ಪರಿಗಣಿಸಿದ ಜಿಲ್ಲಾ ನ್ಯಾಯಾಲಯವು ಮಧ್ಯಸ್ಥರ ತೀರ್ಪಿನಲ್ಲಿದ್ದ ಪರಿಹಾರದ ಮೊತ್ತವನ್ನೇ ಬದಲಾಯಿಸಿತು.
ಇದನ್ನು ಪ್ರಶ್ನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ ಎಐ) ಸೆಕ್ಷನ್ 37ರ ಅಡಿಯಲ್ಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು “ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ತನ್ನದೇ ತೀರ್ಪನ್ನು ಮರುಪರಿಶೀಲಿಸಿ ಮಧ್ಯಸ್ತರ ತೀರ್ಪನ್ನು ತಿದ್ದುಪಡಿ ಮಾಡಿರುವುದು ಕಾನೂನುಬದ್ಧವಲ್ಲ. ಸೆಕ್ಷನ್ 34ರ ಅಡಿಯಲ್ಲಿ ಮಧ್ಯಸ್ಥಿಕೆ ತೀರ್ಪನ್ನು ತಿದ್ದುಪಡಿ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂಬುದು ಸ್ಪಷ್ಟವಾದ ಕಾನೂನು. ಆದ್ದರಿಂದ, ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪು ಮತ್ತು ಆದೇಶವನ್ನು ಕಾಯಂ ಇರಿಸಲಾಗುವುದಿಲ್ಲ. ಜಿಲ್ಲಾ ನ್ಯಾಯಾಲಯವು ಸೆಕ್ಷನ್ 34ರ ಅಡಿಯಲ್ಲಿ ಹೊಂದಿರುವ ಸೀಮಿತ ಅಧಿಕಾರವನ್ನು ಮೀರಿ ನಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿತು.
ಜಿಲ್ಲಾ ನ್ಯಾಯಾಲಯವು ಮಧ್ಯಸ್ಥರ ತೀರ್ಪಿನ ಸಾರಾಂಶವನ್ನೇ ಬದಲಾಯಿಸಿರುವುದರಿಂದ, ಆ ಆದೇಶವನ್ನು ಹೈಕೋರ್ಟ್ ನ್ಯಾಯಪೀಠವು ರದ್ದು ಗೊಳಿಸಿತು. ಪ್ರಕರಣವನ್ನು ಕಾನೂನಿನ ಪ್ರಕಾರ ಮರುಪರಿಶೀಲನೆ ನಡೆಸುವಂತೆ ಹಾವೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಿಂದಿರುಗಿಸಿ, ಬಾಕಿ ಇದ್ದ ಎಲ್ಲಾ ಅರ್ಜಿಗಳನ್ನು ಸಹ ವಿಲೇವಾರಿ ಮಾಡಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
