ಹೀರಾ ಗೋಲ್ಡ್ ಪ್ರಕರಣ: ದೇಶದಲ್ಲೇ ಮೊದಲ ಬಾರಿಗೆ ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್
ನವದೆಹಲಿ: ಹೂಡಿಕೆ ನೆಪದಲ್ಲಿ ಜನರಿಂದ ಹಣ ಸಂಗ್ರಹಿಸಿ ವಂಚನೆ ಎಸಗುವ ಆರ್ಥಿಕ ವಂಚನೆ ನಡೆಸುವ ಕಂಪನಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ರೀತಿ ಸುಪ್ರೀಂಕೋರ್ಟ್ ಮಹತ್ವದ ಐತಿಹಾಸಿಕ ತೀರ್ಪೋಂದನ್ನು ಪ್ರಕಟಿಸಿದೆ.
ಹೀರಾ ಗೋಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀರಾ ಗೋಲ್ಡ್ ಹೆಸರಿನ ಆಸ್ತಿಗಳನ್ನು ಹರಾಜಿನಲ್ಲಿ ಖರೀದಿಸಿದವರಿಗೆ, ಕಂಪನಿ ನಿರ್ದೇಶಕಿ ನೌಹೀರಾ ಅವರ ಬದಲಾಗಿ ತೆಲಂಗಾಣ ಹೈಕೋರ್ಟ್ನ ಪ್ರೋಟೋಕಾಲ್ ರಿಜಿಸ್ಟ್ರಾರ್ ವೆಂಕಟೇಶ್ವರರಾವ್ ಅವರು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಅಂದರೆ, ಆಸ್ತಿ ನೋಂದಣಿ ವೇಳೆ ಕಂಪನಿ ನಿರ್ದೇಶಕಿ ನೌಹೀರಾ ಅವರ ಪರವಾಗಿ ವೆಂಕಟೇಶ್ವರರಾವ್ ಅವರು ಸಹಿ ಮಾಡಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಇಂತಹ ಆದೇಶ ದೇಶದಲ್ಲಿ ಇದೇ ಮೊದಲ ಬಾರಿಗೆ ನೀಡಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ಈ ಆದೇಶದಿಂದ ಹೀರಾ ಗೋಲ್ಡ್ ಸಂತ್ರಸ್ತರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ.
ಏನಿದು ಪ್ರಕರಣ? ಸಂಪೂರ್ಣ ವಿವರ ಇಲ್ಲಿದೆ ನೋಡಿ…
‘ಹೀರಾ ಗೋಲ್ಡ್’ ಎಂಬ ಕಂಪನಿ 2009ರಲ್ಲಿ ಸ್ಥಾಪನೆಯಾಗಿ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಜನರನ್ನು ಆಕರ್ಷಿಸಿ ಹೂಡಿಕೆ ರೂಪದಲ್ಲಿ ಹಣ ಸಂಗ್ರಹಿಸಿತ್ತು. ಕಂಪನಿಯ ನಿರ್ದೇಶಕಿ ಶೇಕ್ ನೌಹೀರಾ (ಮಹಿಳೆ) ಕಡಿಮೆ ಹೂಡಿಕೆಗೆ ಹೆಚ್ಚು ಲಾಭದ ಆಸೇ ತೋರಿಸಿ ಸಾಮಾನ್ಯ ಜನರಿಂದ ಸಾವಿರಾರು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ್ದರು. ಶೇ.36ರಷ್ಟು ಬಡ್ಡಿ ನೀಡುವ ಆಮಿಷವೊಡ್ಡಿದ್ದರಿಂದ ಹೆಚ್ಚಿನ ಸಂಖ್ಯೆಯ ಜನರು ಹೀರಾ ಗೋಲ್ಡ್ ನಲ್ಲಿ ಹಣ ಹೂಡಿಕೆ ಮಾಡಿದ್ದರು.ಈ ಪ್ರಕರಣದಲ್ಲಿ ಕಂಪನಿಯು ಸುಮಾರು ₹3 ಸಾವಿರ ಕೋಟಿಯಿಂದ ₹5 ಸಾವಿರ ಕೋಟಿವರೆಗೆ ಜನರಿಂದ ಸಂಗ್ರಹಿಸಿರುವುದು ಪತ್ತೆಯಾಗಿತ್ತು.
ಈ ಮಧ್ಯೆ ಕಂಪನಿ ವಿರುದ್ದ ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆ ಆರಂಭಿಸಿತ್ತು. ಮನಿ ಲಾಂಡರಿಂಗ್ ಸೇರಿದಂತೆ ಹಲವು ಆರ್ಥಿಕ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನೌಹೀರಾ ಅವರನ್ನು ಹಲವು ಬಾರಿ ಬಂಧಿಸಲಾಗಿತ್ತು. ಆದರೆ ಪ್ರತಿ ಬಾರಿ ಅವರು ಯಾವುದೋ ಒಂದು ರೀತಿಯಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದರು. ಈ ವರ್ಷದ ಮೇ ತಿಂಗಳಲ್ಲಿಯೂ ಅವರನ್ನು ಮತ್ತೆ ಬಂಧಿಸಲಾಗಿತ್ತು.
ಒಂದೇ ಪ್ರಕರಣವಾಗಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೀರಾ ಗೋಲ್ಡ್ ಪ್ರಕರಣ ಹಲವು ರಾಜ್ಯಗಳಿಗೆ ಸಂಬಂಧಿಸಿದ್ದರಿಂದ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿತ್ತು. ಬಳಿಕ ಸುಪ್ರೀಂಕೋರ್ಟ್ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿ ಒಂದೇ ಪ್ರಕರಣವಾಗಿ ವಿಚಾರಣೆ ನಡೆಸಿತು.
ಈ ಹಿಂದೆ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೀರಾ ಗೋಲ್ಡ್ ನ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಅಧಿಕಾರಿಗಳು ದೇಶದ ವಿವಿಧೆಡೆ ಇರುವ 45ಕ್ಕೂ ಹೆಚ್ಚು ಸ್ಥಳಗಳಲ್ಲಿನ ಹೀರಾ ಗೋಲ್ಡ್ನ ಸ್ಥಿರ ಮತ್ತು ಚರ ಆಸ್ತಿಗಳನ್ನು ವಶಪಡಿಸಿಕೊಂಡಿದ್ದರು. ನಂತರ ಆ ಆಸ್ತಿಗಳನ್ನು ಹರಾಜು ಮಾಡಿ ಬಂದ ಹಣವನ್ನು ಸಂತ್ರಸ್ತರಿಗೆ ಹಂಚುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ ಹರಾಜಿನಲ್ಲಿ ಖರೀದಿಸಿದ ಆಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಾಗಿತ್ತು.
ಇದೀಗ ಆಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಸಮಸ್ಯೆಯನ್ನು ಸುಪ್ರೀಂಕೋರ್ಟ್ ಬಗೆಹರಿಸಿದ್ದು ಹೀರಾ ಗೋಲ್ಡ್ ಹೆಸರಿನ ಆಸ್ತಿಗಳನ್ನು ಹರಾಜಿನಲ್ಲಿ ಖರೀದಿಸಿದವರಿಗೆ, ಕಂಪನಿ ನಿರ್ದೇಶಕಿ ನೌಹೀರಾ ಅವರ ಬದಲಾಗಿ ತೆಲಂಗಾಣ ಹೈಕೋರ್ಟ್ನ ಪ್ರೋಟೋಕಾಲ್ ರಿಜಿಸ್ಟ್ರಾರ್ ವೆಂಕಟೇಶ್ವರರಾವ್ ಅವರು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಆದೇಶಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
