ಪುತ್ರಿ ಪ್ರಾಪ್ತವಯಸ್ಕಳಾದಳೆಂಬ ಕಾರಣಕ್ಕೆ ತಂದೆ ಶಿಕ್ಷಣ ವೆಚ್ಚ ನಿರಾಕರಿಸಲು ಸಾಧ್ಯವಿಲ್ಲ- ಹೈಕೋರ್ಟ್
ಬೆಂಗಳೂರು: ಗೃಹ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ಸೆಕ್ಷನ್ 20ರಡಿ ನೀಡಬಹುದಾದ ಹಣಕಾಸಿನ ಪರಿಹಾರವು ಪುತ್ರಿಯ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದ ವೆಚ್ಚವನ್ನೂ ಒಳಗೊಂಡಿರುತ್ತದೆ. ಹೀಗಾಗಿ ಪುತ್ರಿ ಪ್ರಾಪ್ತವಯಸ್ಕಳಾದಳು ಎಂಬ ಕಾರಣ ನೀಡಿ ತಂದೆ ಪರಿಹಾರವಾಗಿ ಶಿಕ್ಷಣ ವೆಚ್ಚ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ತಂದೆಯು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಏಕಸದಸ್ಯ ಪೀಠವು, ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ಪುತ್ರಿಯ ಶಿಕ್ಷಣ ವೆಚ್ಚಕ್ಕೂ ಹಣಕಾಸಿನ ಪರಿಹಾರ ದೊರೆಯುತ್ತದೆ. ಗೃಹ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ,2005ರ ಸೆಕ್ಷನ್ 20ರಡಿ ನೀಡಬಹುದಾದ ಹಣಕಾಸಿನ ಪರಿಹಾರ ವು ಪುತ್ರಿಯ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದ ವೆಚ್ಚವನ್ನೂ ಒಳಗೊಂಡಿರುತ್ತದೆ. ಪುತ್ರಿ ಪ್ರಾಪ್ತವಯಸ್ಕಳಾಗಿದ್ದಾಳೆ ಎಂಬ ಕಾರಣಕ್ಕೆ ತಂದೆಯು ಆಕೆಯ ಶಿಕ್ಷಣ ವೆಚ್ಚವನ್ನು ಭರಿಸಲು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
”ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ನೀಡುವ ಹಣಕಾಸಿನ ಪರಿಹಾರವು ನಿರ್ವಹಣಾ ಭತ್ಯೆಗೆ ಹೆಚ್ಚುವರಿಯಾಗಿದೆ. ಪುತ್ರಿಯು ಪದವಿ ಶಿಕ್ಷಣ ಪಡೆಯುತ್ತಿರಲಿ ಅಥವಾ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರಲಿ, ಆಕೆಯ ಶಿಕ್ಷಣ ವೆಚ್ಚವನ್ನು ಭರಿಸುವುದು ತಂದೆಯ ಕಾನೂನುಬದ್ಧ ಕರ್ತವ್ಯ.” ಎಂದು ನ್ಯಾಯಪೀಠ ತಿಳಿಸಿದೆ.
ಪುತ್ರಿಯು ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20(ಜ) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತನ್ನ ಎಂ.ಡಿ. (ಡರ್ಮಟಾಲಜಿ) ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಮೊದಲ ವರ್ಷದ ಶುಲ್ಕ ಮತ್ತು ಇತರ ಶಿಕ್ಷಣ ವೆಚ್ಚಗಳಿಗಾಗಿ ₹16 ಲಕ್ಷ ನೀಡುವಂತೆ ಕೋರಿಕೆ ಸಲ್ಲಿಸಿದ್ದರು. ಆಕೆ NEET ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದರು.
ಬ್ಯಾಂಕ್ ಸಾಲ ಪಡೆದು ಶಿಕ್ಷಣ ಮುಂದುವರಿಸಬಹುದು-ತಂದೆಯ ವಾದ
ಈ ವೇಳೆ ವಾದ ಮಂಡಿಸಿದ ಅರ್ಜಿದಾರರ ತಂದೆಯು,, ಪುತ್ರಿಯ ಎಂಬಿಬಿಎಸ್ ಶಿಕ್ಷಣವನ್ನು ಈಗಾಗಲೇ ತಾನೇ ಪೂರ್ಣಗೊಳಿಸಿದ್ದೇನೆ. ಆಕೆ ಈಗ ಪ್ರಾಪ್ತವಯಸ್ಕಳಾಗಿದ್ದು, ಸ್ನಾತಕೋತ್ತರ ಶಿಕ್ಷಣದ ವೇಳೆ ಸ್ಟೈಪೆಂಡ್ ಪಡೆಯುತ್ತಿದ್ದಾಳೆ, ಆದ್ದರಿಂದ ಗೃಹ ಹಿಂಸಾಚಾರ ಕಾಯ್ದೆಯಡಿ ಇಂತಹ ಪರಿಹಾರವನ್ನು ಕೇಳಲು ಸಾಧ್ಯವಿಲ್ಲ, ಅಗತ್ಯವಿದ್ದರೆ ಬ್ಯಾಂಕ್ ಸಾಲ ಪಡೆದು ಶಿಕ್ಷಣ ಮುಂದುವರಿಸಬಹುದು ಎಂದು ಅರ್ಜಿದಾರರ ತಂದೆ ವಾದ ಮಂಡಿಸಿದ್ದರು.
ವಾದ ಆಲಿಸಿದ ನ್ಯಾಯಪೀಠವು, ”ಅವಿವಾಹಿತ ಪ್ರಾಪ್ತವಯಸ್ಕ ಪುತ್ರಿಯು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ಹಣಕಾಸಿನ ಪರಿಹಾರವನ್ನು ಕೇಳಬಹುದೇ?” ಎಂಬ ಪ್ರಶ್ನೆಯನ್ನು ವಿವಾದಾಂಶವನ್ನಾಗಿ ಪರಿಗಣಿಸಿತು.
ನ್ಯಾಯಾಲಯವು, ಈ ಪ್ರಕರಣವು CrPc ಸೆಕ್ಷನ್ 125 ಅಡಿಯ ನಿರ್ವಹಣಾ ಭತ್ಯೆಗೆ ಸಂಬಂಧಿಸಿದದ್ದಲ್ಲ; ಬದಲಾಗಿ ಗೃಹ ಹಿಂಸಾಚಾರ ಕಾಯ್ದೆ ಎಂಬ ವಿಶೇಷ ಕಾನೂನಿನಡಿ ಉದ್ಭವಿಸಿರುವುದರಿಂದ, ಅದರ ಉದ್ದೇಶ ಮತ್ತು ವ್ಯಾಪ್ತಿ ಹೆಚ್ಚು ವಿಶಾಲವಾಗಿದೆ ಎಂದು ತಿಳಿಸಿತು.
ತಂದೆಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿದ ನ್ಯಾಯಾಲಯ, ಅವರು ವ್ಯವಹಾರ ನಡೆಸುತ್ತಿದ್ದು, ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ ಸಾಮರ್ಥ್ಯ ಹೊಂದಿದ್ದು, ಸಾಲ ಪಡೆಯುವ ಮತ್ತು ಮರುಪಾವತಿಸುವ ಆರ್ಥಿಕ ಶಕ್ತಿ ಹೊಂದಿದ್ದಾರೆ ಎಂದು ದಾಖಲಿಸಿತು.
ಆದ್ದರಿಂದ, ”ಪುತ್ರಿಯು ಪ್ರಾಪ್ತವಯಸ್ಕಳಾದ ನಂತರ ತಂದೆಗೆ ಶಿಕ್ಷಣ ವೆಚ್ಚ ಭರಿಸುವ ಜವಾಬ್ದಾರಿ ಇಲ್ಲ ಎಂಬ ವಾದದಲ್ಲಿ ಯಾವುದೇ ಬಲವಿಲ್ಲ.” ಎಂದು ನ್ಯಾಯಪೀಠವು ತಂದೆಯ ವಾದ ತಳ್ಳಿ ಹಾಕಿತು.
ಹೈಕೋರ್ಟ್ ತಂದೆಯ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ, ತಮ್ಮ ಪುತ್ರಿಯ ಎಂ.ಡಿ. ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣದ ವೆಚ್ಚಕ್ಕಾಗಿ ₹16 ಲಕ್ಷ ಪಾವತಿಸಬೇಕು ಎಂಬ ಕೆಳಹಂತದ ನ್ಯಾಯಾಲಯಗಳ ಆದೇಶವನ್ನು ಎತ್ತಿಹಿಡಿದಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
