05/10/2026

Law Guide Kannada

Online Guide

ಆಸ್ತಿ ವಿಭಜನೆ ಕೇಸ್: ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಹೊರಗಿಟ್ಟು ಪಡೆದುಕೊಂಡ ರಾಜಿ ತೀರ್ಪು ಸಿಂಧುವಲ್ಲ- ಸುಪ್ರೀಂಕೋರ್ಟ್

ನವದೆಹಲಿ: ‘ಪೂರ್ವಜರ ಆಸ್ತಿ ವಿಭಜನೆ ಮೊಕದ್ದಮೆಗಳಲ್ಲಿ ಉತ್ತರಾಧಿಕಾರಿಗಳೆಲ್ಲರೂ ಪಕ್ಷಗಾರರು. ಹೀಗಾಗಿ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಹೊರಗಿಟ್ಟು ಪಡೆದುಕೊಂಡ ರಾಜಿ ತೀರ್ಪು ಸಿಂಧುವಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ವಿಭಜನೆ ಪ್ರಕ್ರಿಯೆಯನ್ನು ಪ್ರಶ್ನಿಸಿ, ಬಲ್ಲೋ ಬಾಯಿ ಎಂಬುವವರ ಉತ್ತರಾಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿತ್ತು.

ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ , ‘ಮೊಕದ್ದಮೆಯ ಭಾಗವೇ ಆಗಿರದ ಕಕ್ಷಿದಾರರು, ರಾಜಿ ಒಪ್ಪಂದದ ಭಾಗವಾಗಲು ಮತ್ತು ಅದಕ್ಕೆ ಸಂಬಂಧಿಸಿದ ತೀರ್ಪನ್ನು ಪ್ರಶ್ನಿಸಲು ಅರ್ಹರಲ್ಲ’ ಎಂಬ ತೆಲಂಗಾಣ ಹೈಕೋರ್ಟ್ ಆದೇಶವನ್ನು ಅಮಾನ್ಯಗೊಳಿಸಿತು.

‘ಪೂರ್ವಜರ ಆಸ್ತಿ ವಿಭಜನೆ ಮೊಕದ್ದಮೆಗಳಲ್ಲಿ, ‘ಕಾನೂನುಬದ್ಧ ವಾರಸುದಾರರನ್ನು ಹೊರಗಿನವರು ಎಂದು ಪರಿಗಣಿಸಲಾಗದು. ಎಲ್ಲ ಅರ್ಹ ಉತ್ತರಾಧಿಕಾರಿಗಳನ್ನು ಕಕ್ಷಿದಾರರನ್ನಾಗಿ ಸೇರಿಸುವ ಕಾರ್ಯದಲ್ಲಿ ವಿಫಲವಾದರೆ, ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ ಇಡೀ ಪ್ರಕ್ರಿಯೆ ಮತ್ತು ರಾಜಿ ತೀರ್ಪು ಅನೂರ್ಜಿತವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಏನಿದು ವಿವಾದ…?
ವ್ಯಕ್ತಿಯೊಬ್ಬರು ತಮ್ಮ ತಂದೆಯ ಆಸ್ತಿ ವಿಭಜನೆ ಪ್ರಕರಣದಲ್ಲಿ ತಮ್ಮ ಇಬ್ಬರು ಸಹೋದರರನ್ನು ಪಕ್ಷಗಾರರನ್ನಾಗಿ ಮಾಡಿ 2000ನೇ ಸಾಲಿನಲ್ಲಿ ಮೊಕದ್ದಮೆ ಹೂಡಿದ್ದರು. ಆದರೆ, ತಮ್ಮ ಏಕೈಕ ಸಹೋದರಿ ಬಲ್ಲೋ ಬಾಯಿ ಅವರನ್ನು ಪಕ್ಷಗಾರರನ್ನಾಗಿ ಮಾಡಿರಲಿಲ್ಲ. ನಂತರ ನ್ಯಾಯಾಲಯವು 2009ರಲ್ಲಿ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ಬಳಿಕ ಮೇಲ್ಮನವಿ ಸಲ್ಲಿಸಿದ್ದ ಮೂಲ ಅರ್ಜಿದಾರರು, ಎರಡನೇ ಬಾರಿಯೂ ಸಹೋದರಿಯನ್ನು ಪಕ್ಷಗಾರರನ್ನಾಗಿ ಮಾಡಿರಲಿಲ್ಲ. ಆದರೆ, ಆ ವೇಳೆಗೆ ಸಹೋದರಿ ನಿಧನರಾಗಿದ್ದು ನಂತರ ಮೂವರು ಸಹೋದರರು ಆಸ್ತಿಯನ್ನು ತಮ್ಮಲ್ಲಿಯೇ ವಿಭಜನೆ ಮಾಡಿಕೊಳ್ಳುವ ಒಪ್ಪಂದಕ್ಕೆ ಬಂದಿದ್ದರು. ತೆಲಂಗಾಣ ಹೈಕೋರ್ಟ್ ಈ ನಿರ್ಧಾರವನ್ನು ಒಪ್ಪಿ, 2020ರಲ್ಲಿ ತೀರ್ಪು ನೀಡಿತ್ತು.

ಆದರೆ ವಿಭಜನೆ ಪ್ರಕ್ರಿಯೆಯನ್ನು ಪ್ರಶ್ನಿಸಿ, ಬಲ್ಲೋ ಬಾಯಿ ಅವರ ಉತ್ತರಾಧಿಕಾರಿಗಳು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಕೋರ್ಟ್ 2025ರಲ್ಲಿ ಮೇಲ್ಮನವಿಯನ್ನ ತಿರಸ್ಕರಿಸಿತ್ತು. ನಂತರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

‘ಹಿಂದೂ ಉತ್ತರಾಧಿಕಾರ ಕಾಯ್ದೆಯ 2005ರ ತಿದ್ದುಪಡಿ ಅನ್ವಯ, ಬಲ್ಲೋ ಬಾಯಿ ಕೂಡ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು ಮತ್ತು ಅವರೂ ಅಗತ್ಯ ಪಕ್ಷಗಾರರು. ಆದ್ದರಿಂದ ಅವರು ಅಥವಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಹೊರಗಿಟ್ಟು ಪಡೆದುಕೊಂಡ ರಾಜಿ ತೀರ್ಪು ಸಿಂಧುವಲ್ಲ’ ಎಂದು ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಹೇಳಿದೆ.
ಮೊಕದ್ದಮೆಯನ್ನು ಹೈಕೋರ್ಟ್ಗೆ ಮರಳಿಸಿದ ಸುಪ್ರೀಂಕೋರ್ಟ್ , ತನ್ನ ಅವಗಾಹನೆ ಅಡಿಯಲ್ಲಿ ಮೂವರು ಸಹೋದರರ ವಾದವನ್ನು ಹೊಸದಾಗಿ ಆಲಿಸಬೇಕು. ಬಲ್ಲೋ ಬಾಯಿ ಅವರ ಉತ್ತರಾಧಿಕಾರಿಗಳು ಕೂಡ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಸ್ವತಂತ್ರರು ಎಂದು ತೀರ್ಪು ನೀಡಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.