23/10/2026

Law Guide Kannada

Online Guide

ಕಾನೂನು ವೃತ್ತಿ ನ್ಯಾಯದ ಪರ ನಿಲ್ಲುವ ಧೀಮಂತಿಕೆ: ಇದು ಧೈರ್ಯವಂತರಿಗೆ ಮಾತ್ರ ಸೀಮಿತ – CJI ಸೂರ್ಯ ಕಾಂತ್

ಬೆಂಗಳೂರು: ಕಾನೂನು ವೃತ್ತಿಯು ನ್ಯಾಯದ ಪರ ನಿಲ್ಲುವ ಧೀಮಂತಿಕೆಯಾಗಿದ್ದು, ಇದು ದುರ್ಬಲ ಮನಸ್ಸಿನವರಿಗಲ್ಲ ಧೈರ್ಯವಂತರಿಗೆ ಮಾತ್ರ ಸೀಮಿತವಾದುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಿವಿಮಾತು ಹೇಳಿದರು.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಜೆಐ ಸೂರ್ಯಕಾತ್ ಅವರು, ಕಾನೂನು ವೃತ್ತಿಗೆ ಅಪಾರವಾದ ಧೈರ್ಯ ಮತ್ತು ಬೌದ್ಧಿಕ ಸ್ವಾತಂತ್ರ್ಯ ಬೇಕಾಗುತ್ತದೆ. ಇದು ಕೇವಲ ಕಾಯ್ದೆ-ಕಾನೂನುಗಳ ಮೇಲಿನ ಪ್ರಾವೀಣ್ಯತೆ ಸಾಧಿಸಿದರೇ ಸಾಲದು, ನ್ಯಾಯದ ಪರವಾಗಿ ನಿಲ್ಲುವ ಧೀಮಂತಿಕೆ ಇರಬೇಕು. ಹೀಗಾಗಿ, ಕಾನೂನು ವೃತ್ತಿ ಧೈರ್ಯವಂತರಿಗೆ ಮಾತ್ರ ಸೀಮಿತವಾದುದು , ದುರ್ಬಲ ಮನಸ್ಸಿನವರಿಗಲ್ಲ ಎಂದು ಹೇಳಿದರು..
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದ ಸಿಜೆಐ ಸೂರ್ಯಕಾಂತ್ ಅವರು, ನೀವು ಮುಂದಿನ ದಿನಗಳಲ್ಲಿ ಬೀರಲಿರುವ ಪ್ರಭಾವದ ಅರಿವು ನನಗಿದೆ. ನಿಮ್ಮೆಲ್ಲರಿಂದ ನನಗೆ ಅಪಾರ ನಿರೀಕ್ಷೆಗಳಿವೆ. ಇಲ್ಲಿ ನೀವು ಕಲಿತ ಪಠ್ಯಕ್ರಮವು ನಿಮ್ಮ ಸಹನಶಕ್ತಿಯ ಮಿತಿಯನ್ನೇ ಪರೀಕ್ಷಿಸಿದೆ. ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಳ್ಳುವವರು ಧೈರ್ಯಶಾಲಿಗಳಾಗಿರಬೇಕು. ಕಾನೂನು ಸ್ಥಿರವಾದ ವಿಷಯವಲ್ಲ, ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಕಾನೂನು ವೃತ್ತಿಯಲ್ಲಿ ತೊಡಗಿರುವವರ ಮೂಲಕ ಅದು ಜೀವಂತವಾಗಿರುತ್ತದೆ ಮತ್ತು ವಿಕಸನಗೊಳ್ಳುತ್ತದೆ ಎಂದರು.

ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಸಂಸ್ಥೆಗಳು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಸಂವಿಧಾನವನ್ನು ರಕ್ಷಿಸುವ ವಿಶೇಷ ಜವಾಬ್ದಾರಿ ಯುವ ವಕೀಲರು ಮತ್ತು ನೀತಿ ನಿರೂಪಕರ ಮೇಲಿದೆ. ಸರ್ಕಾರವನ್ನು ಎಲ್ಲರೂ ಒಪ್ಪಿಕೊಳ್ಳುವ ವ್ಯವಸ್ಥೆಯೇ ಬಲಿಷ್ಠ ಪ್ರಜಾಪ್ರಭುತ್ವವಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುವ ವ್ಯವಸ್ಥೆಯೇ ನಿಜವಾದ ಬಲಿಷ್ಠ ಪ್ರಜಾಪ್ರಭುತ್ವ ಎಂದರು.

ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೇಂದ್ರಗಳ ಮಾದರಿಯಲ್ಲಿ, ಕಾನೂನು ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆನಡೆಸುವ ಅಭ್ಯರ್ಥಿಗಳಿಗಾಗಿ ರಾಜ್ಯದಲ್ಲಿ ಪ್ರತ್ಯೇಕ ತರಬೇತಿ ಸಂಸ್ಥೆ ಸ್ಥಾಪಿಸಲಾಗುವುದು, ಎನ್ಎಲ್ಎಸ್ಐಯುನಲ್ಲಿ “ಸ್ಟಾರ್ಟ್ಅಪ್ ಕಾನೂನು ಚಿಕಿತ್ಸಾಲಯ” ಸ್ಥಾಪನೆಗೆ ರಾಜ್ಯ ಸರ್ಕಾರ ನೆರವು ನೀಡಲಿದೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವಕೀಲರು ಯುವ ಉದ್ಯಮಿಗಳಿಗೆ ಉಚಿತ ಕಾನೂನು ಸಲಹೆ ನೀಡಲಿದ್ದಾರೆ ಎಂದರು.

ಈ ವರ್ಷ ಎನ್ಎಲ್ಎಸ್ಐಯುನಿಂದ ಒಟ್ಟು 1,720 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇವರಲ್ಲಿ ಆರು ಮಂದಿ ಪಿಎಚ್ಡಿ, 36 ಮಂದಿ ಮಾಸ್ಟರ್ ಆಫ್ ಪಬ್ಲಿಕ್ ಪಾಲಿಸಿ (ಎಂ.ಪಿ.ಪಿ.), 100 ಮಂದಿ ಮಾಸ್ಟರ್ ಆಫ್ ಲಾಸ್ (ಎಲ್ಎಲ್.ಎಂ.), 72 ಮಂದಿ ಮೂರು ವರ್ಷದ ಬ್ಯಾಚುಲರ್ ಆಫ್ ಲಾ (ಎಲ್ಎಲ್.ಬಿ. ಆನರ್ಸ್), 116 ಮಂದಿ ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಆರ್ಟ್ಸ್ ಅಂಡ್ ಲಾಸ್ (ಬಿ.ಎ. ಎಲ್ಎಲ್.ಬಿ. ಆನರ್ಸ್) ಪಡೆದಿದ್ದಾರೆ. ವಿಶ್ವವಿದ್ಯಾಲಯದ ಆನ್ಲೈನ್ ಮತ್ತು ಹೈಬ್ರಿಡ್ ಕಾರ್ಯಕ್ರಮಗಳ ಮೂಲಕ 1,390 ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ್ದಾರೆ. ಘಟಿಕೋತ್ಸವದಲ್ಲಿ ಒಟ್ಟು 24 ವಿದ್ಯಾರ್ಥಿಗಳಿಗೆ 50 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.