03/11/2026

Law Guide Kannada

Online Guide

ಡಿಜಿಟಲ್ ವಂಚನೆಗೊಳಗಾದ ಸಂತ್ರಸ್ಥರಿಗೆ ಆದ ಹಣಕಸು ನಷ್ಟಕ್ಕೆ ಬ್ಯಾಂಕ್ ಗಳೇ ಹೊಣೆ – ಸುಪ್ರೀಂಕೋರ್ಟ್

ಹೊಸದಿಲ್ಲಿ: “ಡಿಜಿಟಲ್ ವಂಚನೆಗೆ ಒಳಗಾದ ಸಂತ್ರಸ್ತರಿಗೆ ಉಂಟಾಗುವ ಹಣಕಾಸಿನ ನಷ್ಟಕ್ಕೆ ಬ್ಯಾಂಕುಗಳೇ ಹೊಣೆಗಾರರಾಗುತ್ತಾರೆ. ಗ್ರಾಹಕರ ಖಾತೆಗಳಲ್ಲಿನ ಹಣದ ರಕ್ಷಣೆಗೆ ಬ್ಯಾಂಕ್ ವಿಫಲವಾದರೆ ಗ್ರಾಹಕರು ಕಳೆದುಕೊಂಡ ಮೊತ್ತವನ್ನಾದರೂ ಪರಿಹಾರವಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ಹೆಚ್ಚುತ್ತಿರುವ ಡಿಜಿಟಲ್ ವಂಚನೆ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜೋಯ್ಯಲ್ಯ ಬಾಗ್ಚಿ ಹಾಗೂ ನ್ಯಾ.ವಿ.ಮೋಹನಾ ಅವರಿದ್ದ ನ್ಯಾಯಪೀಠ, ಹಣಕಾಸು ಸಂಸ್ಥೆಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿರುವುದು ಕಂಡು ಬಂದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವ ನಿಬಂಧನೆಯನ್ನು ಪ್ರಸ್ತಾವಿತ ನಿಯಂತ್ರಕ ಚೌಕಟ್ಟಿನಲ್ಲಿ ಅಳವಡಿಸಬೇಕು,” ಎಂದು ತಿಳಿಸಿದೆ.

ಡಿಜಿಟಲ್ ವಂಚನೆಗೊಳಗಾದ ಸಂತ್ರಸ್ತರನ್ನು ರಕ್ಷಿಸುವುದು ಹಣಕಾಸು ಸಂಸ್ಥೆಗಳ ಜವಾಬ್ದಾರಿ ಯಾಗಿದೆ. ಗ್ರಾಹಕರ ಖಾತೆಗಳಲ್ಲಿನ ಹಣದ ರಕ್ಷಣೆಗೆ ಬ್ಯಾಂಕ್ ವಿಫಲವಾದರೆ ಅಥವಾ ಬ್ಯಾಂಕ್ನ ಮುನ್ನೆಚ್ಚರಿಕೆ ಲೋಪದಿಂದ ವಂಚನೆ ನಡೆದಿರುವುದು ಕಂಡುಬಂದರೆ ಗ್ರಾಹಕರು ಕಳೆದುಕೊಂಡ ಮೊತ್ತವನ್ನಾದರೂ ಪರಿಹಾರವಾಗಿ ನೀಡಬೇಕು,” ಎಂದು ನ್ಯಾಯಪೀಠ ತಿಳಿಸಿದೆ.

“ಖಾತೆದಾರರ ಸಾಮಾನ್ಯ ವಹಿವಾಟುಗಳಿಗಿಂತ ಭಿನ್ನವಾದ ವಹಿವಾಟುಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು, ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಸ್ವಯಂಚಾಲಿತ ವರದಿ ನೀಡುವುದು, ವಹಿವಾಟುಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಭೌತಿಕ ಪರಿಶೀಲನೆ ನಡೆಸುವುದು ಬ್ಯಾಂಕ್ಗಳ ಜವಾಬ್ದಾರಿಯಾಗಿದೆ. ‘ಗ್ರಾಹಕರನ್ನು ವಂಚಕರಿಂದ ರಕ್ಷಿಸುವುದು ಬ್ಯಾಂಕರ್ ಗಳ ಕರ್ತವ್ಯ. ಈ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರ ಏನು ಮಾಡುತ್ತಿದೆ?” ಎಂದು ಪ್ರಶ್ನಿಸಿರುವ ಮುಖ್ಯ ನ್ಯಾಯಮೂರ್ತಿಗಳು, “ದೊಡ್ಡ ಕಂಪನಿಗಳ ವಹಿವಾಟುಗಳನ್ನು ಗುರುತಿಸಲು ಸಾಧ್ಯವಾಗದಿರಬಹುದು. ಆದರೆ, ಸಾಮಾನ್ಯ ಗ್ರಾಹಕ ರೊಬ್ಬರು ಒಮ್ಮೆಗೆ ಕೇವಲ 10,000 ಅಥವಾ 20,000 ರೂ. ಮಾತ್ರ ಹಿಂಪಡೆಯುತ್ತಿದ್ದ ಖಾತೆಯಿಂದ ಏಕಾಏಕಿ 50,000 ರೂ. ಹಿಂಪಡೆದಾಗ ಅಂತಹ ವಹಿವಾಟನ್ನು ಗುರುತಿಸಬಾರದೇಕೆ?” ಎಂದು ಪ್ರಶ್ನೆ ಮಾಡಿದರು.

ವಿಚಾರಣೆ ವೇಳೆ ಸರಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, “ಸುಪ್ರೀಂ ಕೋರ್ಟ್ ಮಧ್ಯಪ್ರವೇಶ, ಸರಕಾರಿ ಸಚಿವಾಲಯಗಳು ಹಾಗೂ ವಿವಿಧ ಇಲಾಖೆಗಳ ಸಮನ್ವಯ ಕ್ರಮಗಳು, ಸಾರ್ವಜನಿಕ ಜಾಗೃತಿ ಅಭಿಯಾನಗಳಿಂದ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ಶೇ.50ರಷ್ಟು ಕಡಿಮೆಯಾಗಿದೆ,” ಎಂದು ತಿಳಿಸಿದರು.
ಕಠಿಣ ಕ್ರಮಗಳ ಹೊರತಾಗಿಯೂ ಈ ವರ್ಷ 800 ಕೋಟಿ ರೂ. ಡಿಜಿಟಲ್ ವಂಚನೆ ನಡೆದಿದೆ. ಸೈಬರ್ ಅಪರಾಧಕ್ಕೆ ಬಳಸುವ ಮ್ಯೂಲ್ ಖಾತೆಗಳ ಮೇಲೆ ಬ್ಯಾಂಕ್ಗಳು ಗಮನ ನೀಡಬೇಕು. ಅಸಾಮಾನ್ಯ ವಹಿವಾಟುಗಳನ್ನು ಗುರುತಿಸಲು ಸೂಕ್ತ ಪ್ರತಿಕ್ರಿಯೆ, ಕ್ರಮ ಅನುಷ್ಠಾನಗೊಳಿಸಬೇಕು ವಂಚನೆಗೆ ಒಳಗಾದ ಗ್ರಾಹಕರಿಗೆ ಪರಿಹಾರ ನೀಡಲು ಆರ್ಬಿಐ ಕೆವೈಸಿ ನಿರ್ದೇಶನಗಳ ಪರಿಶೀಲನೆ ಮಾಡಬೇಕು ಎಂದು ನ್ಯಾಯಪೀಠ ಸೂಚಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.