22/11/2026

Law Guide Kannada

Online Guide

ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತು, ಜಾಮೀನು: ಸುಪ್ರೀಂ ಆದೇಶಕ್ಕೆ ಅಘಾತ ವ್ಯಕ್ತಪಡಿಸಿದ ಬಿಲ್ಕಿಸ್ ಬಾನು

ನವದೆಹಲಿ : 2002ರ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ 11 ಅಪರಾಧಿಗಳಲ್ಲಿ ಇಬ್ಬರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು ಇದಕ್ಕೆ ಬಿಲ್ಕಸ್ ಬಾನು ಅಘಾತ ವ್ಯಕ್ತಪಡಿಸಿದ್ದಾರೆ.

ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಅಪರಾಧ ಸಾಬೀತಾದ ಇಬ್ಬರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಅವರಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಅದೇಶಕ್ಕೆ ಬಿಲ್ಕಿಸ್ ಬಾನು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ 11 ಅಪರಾಧಿಗಳಲ್ಲಿ ಇಬ್ಬರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರ ಪೀಠವು ಜಾಮೀನು ಮಂಜೂರು ಮಾಡಿದೆ. ‘ನನ್ನ ವಾದವನ್ನು ಆಲಿಸದೆಯೇ ಸುಪ್ರೀಂ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ. ನ್ಯಾಯಾಲಯವು ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿರುವ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಈ ಆದೇಶದ ವಿರುದ್ಧ ಹೋರಾಡುವುದಾಗಿಯೂ ತಿಳಿಸಿದ್ದಾರೆ.

.’ನೋವು, ಆಘಾತ ಮತ್ತು ಕಣ್ಣೀರಿನ ನಡುವೆ, ಈ ಹೇಳಿಕೆಯನ್ನು ನೀಡುತ್ತಿದ್ದೇನೆ. ನನ್ನ ವಾದ ಆಲಿಸದೆಯೇ ಸುಪ್ರೀಂ ಕೋರ್ಟ್ ಎರಡನೇ ಬಾರಿ ಇಂತಹ ಆದೇಶ ಹೊರಡಿಸಿದೆ ಎಂಬುದನ್ನು ನಂಬಲಾಗುತ್ತಿಲ್ಲ. ಕೇವಲ 19 ಯುವತಿಯಾಗಿದ್ದಾಗ ನನ್ನ ಜಗತ್ತು, ನನ್ನ ಮಗು, ನನ್ನ ಮನೆ ಕುಟುಂಬ, ಮತ್ತು ಮಾನವೀಯತೆಯ ಮೇಲಿನ ನನ್ನ ನಂಬಿಕೆ ಎಲ್ಲವನ್ನೂ ಕ್ರೂರವಾಗಿ ಕಿತ್ತುಕೊಳ್ಳಲಾಯಿತು. ಅಂದಿನಿಂದ ಕಳೆದ 24 ವರ್ಷಗಳ ಸುದೀರ್ಘ ಅವಧಿಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ನನಗೆ ನ್ಯಾಯ ಸಿಕ್ಕ ಸಂದರ್ಭದಲ್ಲೆಲ್ಲಾ ಕೃತಜ್ಞಳಾಗಿದ್ದೇನೆ. ಪ್ರತಿ ಬಾರಿಯೂ ನ್ಯಾಯದ ಪರಿಕಲ್ಪನೆಯ ಮೇಲಿನ ನನ್ನ ನಂಬಿಕೆ ಮರುಸ್ಥಾಪನೆಗೊಂಡಿದೆ’ ಎಂದಿದ್ದಾರೆ.

“ಆದರೆ, ಕಷ್ಟಪಟ್ಟು ಎಂದು ಪಡೆದುಕೊಂಡ ನ್ಯಾಯವನ್ನು ಇಂದು ಕಳೆದುಕೊಳ್ಳುತ್ತಿದ್ದೇನೆ ಎಂದು ಅನ್ನಿಸುತ್ತಿದೆ. ಮತ್ತೆ ಕಾಡತೊಡಗಿವೆ. ನ್ಯಾಯದ ಮೇಲಿನ ನಂಬಿಕೆಯನ್ನೇ ಮತ್ತೊಮ್ಮೆ ಕಳೆದುಕೊಳ್ಳುವ ಭಯವೂ ಇದೆ. ನನ್ನೊಂದಿಗೆ ಕ್ರೂರವಾಗಿ ವರ್ತಿಸಿದ ಆ ವ್ಯಕ್ತಿಗಳ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಹೇಗೆ ಅಮಾನತುಗೊಳಿಸಿತು’ ಎಂದು ಬಿಲ್ಕಸ್ ಬಾನು ಬೇಸರ ವ್ಯಕ್ತಪಡಿಸಿದ್ದಾರೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.