ಒಬ್ಬ ವ್ಯಕ್ತಿ ಹಿಂದೂವಾಗಿ ಉಳಿಯಲು, ಹಿಂದೂ ಎಂದು ಸಾಬೀತುಪಡಿಸಲು ದೇವಸ್ಥಾನಕ್ಕೆ ಹೋಗಲೇ ಬೇಕೆಂದಿಲ್ಲ- ಸುಪ್ರೀಂ ಕೋರ್ಟ್
ನವದೆಹಲಿ: ಒಬ್ಬ ವ್ಯಕ್ತಿ ಹಿಂದೂವಾಗಿ ಉಳಿಯಲು ಅಥವಾ ಹಿಂದೂ ಎಂದು ಸಾಬೀತುಪಡಿಸಲು ಕಡ್ಡಾಯವಾಗಿ ದೇವಸ್ಥಾನಕ್ಕೆ ಹೋಗಲೇ ಬೇಕೆಂದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಶಬರಿಮಲೆ ಸೇರಿದಂತೆ ದೇಶದ ವಿವಿಧೆಡೆ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ನಡೆಯುತ್ತಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಬಿ.ವಿ ನಾಗರತ್ನ, ಅಹ್ವಾನುದ್ದೀನ್ ಅಮಾನುಲ್ಲಾ, ಎಂ.ಎಂ ಸುಂದರೇಶ್ಅಗಸ್ಟೀನ್ ಜಾರ್ಜ್ ಮಸೀಹ್, , ಅರವಿಂದ್ ಕುಮಾರ್, ಪ್ರಸನ್ನ ಬಿ. ವರಾಳೆ, ಆರ್.ಮಹಾದೇವನ್ ಅವರ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ.
ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದ್ದು, ಅದನ್ನು ಸಾಬೀತುಪಡಿಸಲು ಕಡ್ಡಾಯವಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಅಥವಾ ಧಾರ್ಮಿಕ ವಿಧಿವಿಧಾನಗಳನ್ನು ನೆರೆವೇರಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಪ್ರಕರಣ ಸಂಬಂಧ ವಾದ ಮಂಡಿಸಿದ ಮಧ್ಯಸ್ಥಿಕೆದಾರರ ಪರ ವಕೀಲ ಡಾ. ಜಿ. ಮೋಹನ್ ಗೋಪಾಲ್ ಅವರು, ಧಾರ್ಮಿಕ ಸಮುದಾಯಗಳ ಒಳಗಿನಿಂದಲೇ ಸಾಮಾಜಿಕ ನ್ಯಾಯಕ್ಕಾಗಿ ಬೇಡಿಕೆಗಳು ಉದ್ಭವಿಸುತ್ತಿವೆ. ಹಿಂದೂ ಧರ್ಮವನ್ನು ಒಂದು ಧಾರ್ಮಿಕ ವರ್ಗವಾಗಿ ವ್ಯಾಖ್ಯಾನಿಸಲಾಗಿದೆ. ತದನಂತರ, 1966ರಲ್ಲಿ, ವೇದವನ್ನು ಸರ್ವೋಚ್ಚ ಎಂದು ಯಾರು ಒಪ್ಪಿಕೊಳ್ಳುತ್ತಾರೋ ಅವರು ಹಿಂದೂ ಎಂದು ತೀರ್ಪು ನೀಡಲಾಗಿತ್ತು. ಆದರೆ ನಮ್ಮಲ್ಲಿ ಯಾರೂ ಹಾಗೆ ಹೇಳಿರಲಿಲ್ಲ’ ಎಂದರು.
ಹಾಗೆಯೇ ‘ನನಗೆ ವೇದಗಳ ಬಗ್ಗೆ ಅತ್ಯಂತ ಗೌರವವಿದೆ. ಆದರೆ ಇಂದು ‘ಹಿಂದೂ’ ಎಂದು ವರ್ಗೀಕರಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು ವೇದಗಳನ್ನು ಸರ್ವೋಚ್ಚ ಎಂದು ಒಪ್ಪಿಕೊಳ್ಳುತ್ತಾರೆಂಬುವುದು ಸತ್ಯವೇ?’ ಎಂದು ಡಾ. ಜಿ. ಮೋಹನ್ ಗೋಪಾಲ್ ಪ್ರಶ್ನಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ ಅವರು, ‘ಹಿಂದೂ ಧರ್ಮವನ್ನು ದೀರ್ಘಕಾಲದಿಂದಲೂ ಒಂದು ಜೀವನ ವಿಧಾನವೆಂದು ಅರ್ಥೈಸಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿಯು ಹಿಂದೂವಾಗಿ ಉಳಿಯಲು ಕಡ್ಡಾಯವಾಗಿ ದೇವಸ್ಥಾನಕ್ಕೆ ಭೇಟಿ ನೀಡಬೇಕಾಗಿಲ್ಲ ಅಥವಾ ಧಾರ್ಮಿಕ ವಿಧಿವಿಧಾನಗಳನ್ನು ಮಾಡಬೇಕಾಗಿಲ್ಲ.ನಂಬಿಕೆಯು ವೈಯಕ್ತಿಕವಾದುದು. ಒಬ್ಬ ವ್ಯಕ್ತಿಯು ಧಾರ್ಮಿಕ ಆಚರಣೆಗಳನ್ನು ಮಾಡದ ಕಾರಣಕ್ಕೆ ಅವರ ಆಧ್ಯಾತ್ಮಿಕ ನಂಬಿಕೆಗಳಿಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದರು.
ಈ ವೇಳೇ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ತಮ್ಮ ಮನೆಯ ಅಥವಾ ಗುಡಿಸಲಿನ ಒಳಗೆ ದೀಪವನ್ನು ಹಚ್ಚುವುದು ಕೂಡ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಯನ್ನು ಪ್ರದರ್ಶಿಸಲು ಸಾಕಾಗುತ್ತದೆ ಎಂದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
