23/04/2026

Law Guide Kannada

Online Guide

ನ್ಯಾಯಾಂಗ ಸೇವೆ ಪ್ರವೇಶ: ವಕೀಲ ವೃತ್ತಿಯಲ್ಲಿ ಮೂರು ವರ್ಷಗಳ ಪೂರ್ವ ಅಭ್ಯಾಸ ಕಡ್ಡಾಯ ನಿಯಮ ಇವರಿಗೆ ಅನ್ವಯಿಸಲ್ಲ

ನವದೆಹಲಿ: ಆರಂಭಿಕ ಹಂತದ ನ್ಯಾಯಾಂಗ ಸೇವೆಗಾಗಿ ವಕೀಲ ವೃತ್ತಿಯಲ್ಲಿ ಮೂರು ವರ್ಷಗಳ ಪೂರ್ವ ಅಭ್ಯಾಸದ ಕಡ್ಡಾಯ ನಿಯಮವು 2025 ರ ಮೇ 20 ಮೊದಲು ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಹುದ್ದೆಯ ಆಕಾಂಕ್ಷಿಗಳು ಆರಂಭಿಕ ಹಂತದ ನ್ಯಾಯಾಂಗ ಸೇವೆಗೆ ಅರ್ಹತೆ ಪಡೆಯಲು ಕನಿಷ್ಠ ಮೂರು ವರ್ಷಗಳ ಕಾಲ ವಕೀಲರಾಗಿ ಅಭ್ಯಾಸ ಮಾಡಿರಬೇಕು ಎಂದು ಸುಪ್ರೀಂ ಕೋರ್ಟ್ ಮೇ 20, 2025ರಲ್ಲಿ ತೀರ್ಪು ನೀಡಿತ್ತು . ಈ ನಿಯಮದಿಂದ ವಿನಾಯಿತಿ ಕೋರಿ ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (ನಿವೃತ್ತರಾದ ನಂತರ) ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರು ಜುಲೈ 28, 2018 ರಂದು ದೆಹಲಿಯ ಬಾರ್ ಕೌನ್ಸಿಲ್ನಲ್ಲಿ ತಾತ್ಕಾಲಿಕವಾಗಿ ನೋಂದಾಯಿಸಿದ್ದರು. ಆ ಸಮಯದಲ್ಲಿ ವಕೀಲರಾಗಿ ಮೂರ ವರ್ಷ ಪೂರ್ವಾಭ್ಯಾಸ ಕಡ್ಡಾಯವಾಗಿರಲಿಲ್ಲ. ಈ ಮಧ್ಯೆ ಅರ್ಜಿದಾರರು ದೆಹಲಿ ನ್ಯಾಯಾಂಗ ಸೇವೆಗಳಲ್ಲಿ ಸಿವಿಲ್ ನ್ಯಾಯಾಧೀಶ (ಜೂನಿಯರ್ ವಿಭಾಗ) ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇದಾದ ನಂತರ ಅರ್ಜಿದಾರರು ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳಲ್ಲಿ ಆಯ್ಕೆಯಾಗಿದ್ದು ಅವರನ್ನು ನವೆಂಬರ್ 19, 2019 ರಂದು ಸಿವಿಲ್ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು.

ಪ್ರಸ್ತುತ ಅವರು ಆರು ವರ್ಷಗಳಿಂದ ನ್ಯಾಯಾಂಗ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರೂ, ಅವರು ಸೇವೆಗೆ ಸೇರುವ ಸಮಯದಲ್ಲಿ ಸಿವಿಲ್ ನ್ಯಾಯಾಧೀಶ (ಜೂನಿಯರ್ ವಿಭಾಗ) ಹುದ್ದೆಗೆ ರ್ಜಿ ಸಲ್ಲಿಸಲು ವಕೀಲರಾಗಿ ಮೂರು ವರ್ಷಗಳ ಪೂರ್ವ ಅಭ್ಯಾಸ ಕಡ್ಡಾಯವಾಗಿರಲಿಲ್ಲ. ಹೀಗಾಗಿ “ಅರ್ಜಿದಾರರು ಈಗಾಗಲೇ ಆರು ವರ್ಷಗಳ ಕಾಲ ನ್ಯಾಯಾಂಗ ಅಧಿಕಾರಿಯಾಗಿ ಕೆಲಸ ಮಾಡಿರುವುದರಿಂದ, ಈ ಷರತ್ತು ಅವರಿಗೆ ಅನ್ವಯಿಸುವುದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ನ್ಯಾಯಪೀಠವು ಅವರ ಮನವಿಯನ್ನು ಅಂಗೀಕರಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.