23/06/2026

Law Guide Kannada

Online Guide

ಸಿವಿಲ್, ಸೇವಾ ವಿವಾದಗಳಿಗೆ ಕ್ರಿಮಿನಲ್ ಬಣ್ಣ ಬಳಿದು ಎಸ್ಸಿ-ಎಸ್ಟಿ ಕಾಯ್ದೆ ದುರ್ಬಳಕೆ ಸಲ್ಲದು: ಹೈಕೋರ್ಟ್

ಬೆಂಗಳೂರು: ಸಿವಿಲ್ ಮತ್ತು ಸೇವಾ ವಿವಾದಗಳಿಗೆ ಕ್ರಿಮಿನಲ್ ಬಣ್ಣ ಬಳಿದು ಎಸ್ಸಿ-ಎಸ್ಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ , ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಐವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿ ತೀರ್ಪು ನೀಡಿದೆ.

ರವಿ ಎಂಬವವರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಭದ್ರಾವತಿಯ “ಮಲ್ನಾಡ್ ಅಲಾಯ್ಸ್ ಕಾಸ್ಟಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಮಧುಕರ್ ಜೋಯಿಸ್, ಕಾರ್ಯನಿರ್ವಾಹಕ ನಿರ್ದೇಶಕ ಪ್ರತೀಕ್ ಎಂ. ಜೋಯಿಸ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಜಗದೀಶ್ ಸೇರಿದಂತೆ ಇತರೆ ಇಬ್ಬರು ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರ ವಿರುದ್ಧ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪದ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು , ಕಾರ್ಮಿಕ ಮತ್ತು ಸಿವಿಲ್ ಪ್ರಕರಣಗಳಿಗೆ ಕ್ರಿಮಿನಲ್ ಸ್ವರೂಪ ನೀಡಿ, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಆರೋಪ ಹೊರಿಸಿ ಕಾಯ್ದೆಯ ದುರುಪಯೋಗ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

“ಕಂಪನಿ ಷೋಕಾಸ್ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಂಡಿದ್ದಕ್ಕೆ ಪ್ರತಿಕಾರ ಪಡೆಯಲು ಆಡಳಿತ ಮಂಡಳಿ ವಿರುದ್ಧ ಈ ಸುಳ್ಳು ದೂರನ್ನು ದಾಖಲಿಸಲಾಗಿದೆ ಎಂಬುದು ವೇದ್ಯವಾಗುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಐವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿತು.

‘ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆಯಡಿ ದೂರು ದಾಖಲು ಮಾಡಬೇಕಾದರೆ ಅಂತಹ ನಿಂದನಾತ್ಮಕ ಘಟನೆಯು ಸಾರ್ವಜನಿಕರು ಗಮನಿಸುವ ಅಥವಾ ಸಾರ್ವಜನಿಕ ಸ್ಥಳದಲ್ಲಿ ನಡೆದಿರಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ಈಗಾಗಲೇ ಸಾಕಷ್ಟು ಪ್ರಕರಣಗಳಲ್ಲಿ ತೀರ್ಮಾನಿಸಿದೆ. ಹಾಗಾಗಿ, ಈ ಪ್ರಕರಣದಲ್ಲಿ ಆರೋಪಿಸಲಾದ ಘಟನೆ ಕಂಪನಿಯ ಒಳಗಿನ ನಾಲ್ಕು ಗೋಡೆಗಳ ಮಧ್ಯೆ ನಡೆದಿದೆ” ಎಂಬುದನ್ನು ಗಮನಿಸಿದ ನ್ಯಾಯಪೀಠವು, ಅಂತೆಯೇ, “ಸಿವಿಲ್ ಮತ್ತು ಸೇವಾ ವಿವಾದಗಳಿಗೆ ಕ್ರಿಮಿನಲ್ ಬಣ್ಣ ಬಳಿದು ವಿಶೇಷ ಕಾಯ್ದೆಗಳನ್ನು ದುರುಪಯೋಗ ಮಾಡಿಕೊಳ್ಳುವುದು ಕಾನೂನಿನ ಪ್ರಕ್ರಿಯೆಯ ದುರ್ಬಳಕೆ” ಎಂದು ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.