24/09/2026

Law Guide Kannada

Online Guide

ಗಾಂಜಾ ಪ್ರಕರಣಗಳಲ್ಲಿ ʼಉದಾರʼ ನಿಲುವು: ಕಠಿಣ ನಿಯಮಕ್ಕೆ ತಾಕೀತು ಮಾಡಿದ ಸುಪ್ರೀಂ

ನವದೆಹಲಿ: ಗಾಂಜಾ ಪ್ರಕರಣಗಳಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ತಾವು “ಬಹಳ ಉದಾರವಾದ” ನಿಲುವು ಹೊಂದಿದ್ದೇವೆ. ಹೀಗಾಗಿ ಈ ಬಗ್ಗೆ ಕಠಿಣ ನಿಲುವು ತಾಳುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ.

252ಕೆ.ಜಿ.ಗೂ ಹೆಚ್ಚು, ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರಿದ್ದ ನ್ಯಾಯಪೀಠವು ಗಾಂಜಾ ಪ್ರಕರಣಗಳಿಗೆ ಬಂದಾಗ ನಾವು ಬಹಳ ಉದಾರವಾಗಿದ್ದೇವೆ” ಕಠಿಣ ನಿಲುವು ತಾಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಪಶ್ಚಿಮ ಬಂಗಾಳದ ನಿವಾಸಿ ಬಿಸ್ಪನಾಥ್ ಮಂಡಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಮಂಡಲ್ ವಿರುದ್ಧ ದಾಖಲಾಗಿರುವ NDPS ಪ್ರಕರಣದಲ್ಲಿ 252.330 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪವಿತ್ತು ಎಂಬುದನ್ನು ಗಮನಿಸಿತು.

“ಜಾಮೀನಿಗಾಗಿ ಬನ್ನಿ, ನಾವು ನೀಡುತ್ತೇವೆ. ನೋಡಿ, ಗಾಂಜಾ ವಿಷಯಕ್ಕೆ ಬಂದಾಗ ನಾವು ಬಹಳ ಉದಾರವಾಗಿದ್ದೇವೆ. ಇಂತಹ ಪ್ರಕರಣಗಳು ನಮ್ಮ ಮುಂದೆ ಬಂದಾಗ ನಾವು ಜಾಮೀನು ನೀಡುತ್ತೇವೆ.” ಎಂದು ಮೌಖಿಕವಾಗಿ ನ್ಯಾಯಪೀಠವು ಅರ್ಜಿದಾರರ ಪರ ವಕೀಲರಿಗೆ ಹೇಳಿತು.

ಏನಿದು ಪ್ರಕರಣದ ಹಿನ್ನೆಲೆ
ಅಭಿಯೋಜಕರ ಪ್ರಕಾರ, ರಾಜ್ ಪುರ, ಬೈರಾತಿ ಪ್ರದೇಶದಲ್ಲಿರುವ ಒಂದು ಮನೆಯಿಂದ 252.330 ಕೆ.ಜಿ. ತೂಕದ 15 ಪ್ಯಾಕೆಟ್ ಗಳಲ್ಲಿದ್ದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಶೋಧನೆ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆದ ಸಂದರ್ಭದಲ್ಲಿ ಮಂಡಲ್ ಸ್ಥಳದಲ್ಲಿ ಇರಲಿಲ್ಲ. ಆದರೂ, ಕಲ್ಕತ್ತಾ ಹೈಕೋರ್ಟ್ ಮಂಡಲ್ ಅವರು ಆ ಮನೆಯಿಂದ ತಮ್ಮನ್ನು ಸಂಪೂರ್ಣವಾಗಿ ಬೇರ್ಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಅವರನ್ನು ಆ ಮನೆಯ ಮಾಲೀಕರೆಂದು ಪರಿಗಣಿಸಿದ ಹೈಕೋರ್ಟ್, NDPS ಕಾಯ್ದೆಯ ಸೆಕ್ಷನ್ 37ರ ಅಡಿಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನೂ ಗಮನಿಸಿತ್ತು.

ಕೂಚ್ ಬಿಹಾರ್ ನ ಕೋಟ್ನಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIRಗೆ ಸಂಬಂಧಿಸಿದಂತೆ, ಫೆಬ್ರವರಿ 13, 2026ರಂದು ಕಲ್ಕತ್ತಾ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಮಂಡಲ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಆದರೆ ಗಾಂಜಾ ಪ್ರಕರಣಗಳಲ್ಲಿ ಜಾಮೀನು ನೀಡುವ ವಿಚಾರದಲ್ಲಿ ತಮ್ಮ ಉದಾರ ನಿಲುವಿನ ಬಗ್ಗೆ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಮಂಡಲ್ ಅವರಿಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ ತೀರ್ಪು ನೀಡಿತು.

ಬದಲಾಗಿ, ಮಂಡಲ್ ಅವರಿಗೆ ಶರಣಾಗಿ (surrender) ನಿಯಮಿತ ಜಾಮೀನು (regular bail) ಕೋರುವಂತೆ ಸಮಯಾವಕಾಶ ನೀಡಲು ನ್ಯಾಯಾಲಯ ಮುಂದಾಯಿತು. ಅರ್ಜಿದಾರರು ಉಲ್ಲೇಖಿಸಿದ್ದ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪನ್ನು ಅದರಲ್ಲಿದ್ದ ವಾಸ್ತವಾಂಶಗಳನ್ನು ಪರಿಗಣಿಸದೆ ನೇರವಾಗಿ ಅನ್ವಯಿಸಲು ಸಹ ಪೀಠ ನಿರಾಕರಿಸಿತು. ಅದು ಆ ಪ್ರಕರಣದ ವಾಸ್ತವಾಂಶಗಳ ಆಧಾರದ ಮೇಲಿರಬೇಕು.” ಎಂದು ನ್ಯಾಯಾಲಯ ಹೇಳಿತು. ಅಂತಿಮವಾಗಿ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.