ನೇಮಕಾತಿ ವೇಳೆ ಮಾಹಿತಿ ಮರೆಮಾಚಿದ ಕಾನ್ಸ್ ಟೇಬಲ್ ಸೇವೆಯಿಂದ ವಜಾ: ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ನವದೆಹಲಿ: ನೇಮಕಾತಿ ವೇಳೆ ವಾಸ್ತವ ಮಾಹಿತಿ ಮರೆಮಾಚಿ ನೇಮಕಾತಿ ಪಡೆದ ಆರೋಪದ ಮೇಳೆ ಕೇಂದ್ರ ಮೀಸಲು ಪಡೆಯ ಕಾನ್ಸ್ಟೆಬಲ್ ನನ್ನು ಸೇವೆಯಿಂದ ವಜಾಗೊಳಿಸಿದ ಶಿಸ್ತು ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ವಾನುದ್ದೀನ್ ಅಮಾನುಲ್ಲಾ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು, ಭಾರತ ಒಕ್ಕೂಟ ಮತ್ತು ಇತರರು ಗಿs ಶಿಶು ಪಾಲ್ ಯಾನೆ ಶಿವ ಪಾಲ್” ಈ ಪ್ರಕರಣದಲ್ಲಿ ತೀರ್ಪು ನೀಡಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯಲಿ ಕಾನ್ನೈಬಲ್ ಹುದ್ದೆಯ ನೇಮಕಾತಿ ಸಂದರ್ಭದಲ್ಲಿ ತನ್ನ ವಿರುದ್ಧ ವಿಚಾರಣೆಗೆ ಬಾಕಿ ಇರುವ ಎರಡು ಕ್ರಿಮಿನಲ್ ಪ್ರಕರಣಗಳ ಬಗ್ಗೆ, ಮಾಹಿತಿಯನ್ನು ಕಾನ್ಸ್ ಟೇಬಲ್ ಶಿಶು ಪಾಲ್ ಯಾನೆ ಶಿವ ಪಾಲ್ ಮರೆಮಾಚಿದ್ದರು. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ನಡೆಸಿದ ಶಿಸ್ತು ಪ್ರಾಧಿಕಾರ ಕಾನ್ಸ್ ಟೇಬಲ್ ಶಿಶು ಪಾಲ್ ಯಾನೆ ಶಿವ ಪಾಲ್ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಇದೀಗ ಈ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ಎತ್ತಿ ಹಿಡಿದಿದೆ.
2011 ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯಲಿ ಕಾನ್ಸ್ಟೆಬಲ್ ಹುದ್ದೆಗೆ ಶಿಶು ಪಾಲ್ ಶಿವ ಪಾಲ್ ಎಂಬವರು ಆಯ್ಕೆಯಾಗಿದ್ದರು. ನೇಮಕಾತಿಯ ಸಂದರ್ಭದಲ್ಲಿ ತನ್ನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ವಿಚಾರಣೆಯಲ್ಲಿ ಬಾಕಿ ಇಲ್ಲ ಮತ್ತು ತಾನು ಯಾವುದೇ ಅಪರಾಧ ಕೃತ್ಯದಲ್ಲಿ ಈ ಹಿಂದೆ ಭಾಗಿಯಾಗಿಲ್ಲ ಎಂಬ ಘೋಷಣೆ ಮಾಡಿದ್ದರು.
ಈ ಮಧ್ಯೆ ಇಲಾಖೆಯ ಪರಿಶೀಲನೆ ಸಂದರ್ಭದಲ್ಲಿ ಉದ್ಯೋಗಿಯ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳು ಭಾರತೀಯ ದಂಡ ಸಂಹಿತೆ ಮತ್ತು ಉತ್ತರ ಪ್ರದೇಶ ಗೂಂಡಾ ಕಾಯ್ದೆ ಅಡಿ ದಾಖಲಾದ ವಿಷಯ ಬೆಳಕಿಗೆ ಬಂದಿತ್ತು. ಈ ಪ್ರಕರಣಗಳಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಪೊಲೀಸ್ ವೆರಿಫಿಕೆಶನ್ ಸಮಯದಲ್ಲಿ ತನ್ನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂಬ ಬಗೆ, ನಕಲಿ ಪೊಲೀಸ್ ಪರಿಶೀಲನಾ ದಾಖಲೆಗಳನ್ನು ಆಪಾದಿತ ಕಾನ್ಸ್ ಟೇಬಲ್ ಶಿಶು ಪಾಲ್ ಇಲಾಖೆಗೆ ನೀಡಿದ್ದರು. ಸದರಿ ಪೊಲೀಸ್ ವೆರಿಫಿಕೇಶನ್ ವರದಿ ಸುಳ್ಳು ಎಂಬುದು ಬಳಿಕ ಇಲಾಖೆಯ ಅಧಿಕಾರಿಗಳ ಅವಗಾಹನೆಗೆ ಬಂದಿತ್ತು. ಪರಿಶೀಲನಾ ಪಟ್ಟಿಯಲ್ಲಿ ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಹಾಗೂ ವಿಚಾರಣೆ ಎದುರಿಸಿರುವ ಕುರಿತು ಘೋಷಣೆ ಮಾಡಬೇಕೆಂದು ಸ್ಪಷ್ಟವಾಗಿ ನಿರ್ದೇಶಿಸಲಾಗಿತ್ತು.
ಭಾರತೀಯ ದಂಡ ಸಂಹಿತೆ ಮತ್ತು ಉತ್ತರಪ್ರದೇಶ ಗೂಂಡಾ ಕಾಯ್ದೆಗಳ ಅಡಿ ಆರೋಪಗಳನ್ನು ಒಳಗೊಂಡಂತೆ ತನ್ನ ವಿರುದ್ಧ ಪ್ರಕರಣಗಳು ಬಾಕಿ ಇದೆ ಎಂಬ ವಿಷಯವನ್ನು ತಿಳಿದಿದ್ದರೂ ಅಪಾದಿತ ಉದ್ಯೋಗಿಯು ಪರಿಶೀಲನಾ ಪಟ್ಟಿಯಲ್ಲಿ ನಕಾರಾತ್ಮಕ ಮಾಹಿತಿ ನೀಡಿ ತನ್ನ ಹೇಳಿಕೆಯನ್ನು ಸಮರ್ಥಿಸುವ ನಕಲಿ ದಾಖಲೆಗಳನ್ನು ಸಹ ಸಲ್ಲಿಸಿದರು. ಈ ರೀತಿ ಸುಳ್ಳು ಮಾಹಿತಿ ನೀಡಿರುವುದನ್ನು ಗಂಭೀರ ದುರ್ನಡತೆ ಎಂದು ಪರಿಗಣಿಸಿದ ನೇಮಕಾತಿ ಪ್ರಾಧಿಕಾರವು ಶಿಶು ಪಾಲ್ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿತ್ತು. ವಿಚಾರಣೆ ವೇಳೆ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಶಿಶು ಪಾಲ್ ಯಾನೆ ಶಿವ ಪಾಲ್ ನನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಶಿಸ್ತು ಪ್ರಾಧಿಕಾರದ ಆದೇಶದಿಂದ ಬಾಧಿತರಾದ ಶಿಶು ಪಾಲ್ ಅವರು ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದರು. ಸದರಿ ಮೇಲ್ಮನವಿಯನ್ನು ಪ್ರಾಧಿಕಾರವು ವಜಾಗೊಳಿಸಿತು. ಮೇಲ್ಮನವಿ ಪ್ರಾಧಿಕಾರದ ಆದೇಶದಿಂದ ಭಾದಿತರಾದ ಆಪಾದಿತ ಕಾನ್ನೆಬಲ್ ಶಿಶು ಪಾಲ್ ಅವರು ಶಿಸ್ತು ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ರದ್ದು ಪಡಿಸಿ ತನ್ನನ್ನು ಸೇವೆಗೆ ಮರು ನಿಯುಕ್ತಿ ಗೊಳಿಸಬೇಕೆಂದು ಕೋರಿ ಗುವಾಹಟಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.
ರಿಟ್ ಅರ್ಜಿ ವಿಚಾರಣೆ ನಡೆಸಿದ ಗುವಾಹಟಿ ಹೈಕೋರ್ಟಿನ ಏಕ ಸದಸ್ಯ ನ್ಯಾಯಪೀಠವು ಸೇವೆಯಿಂದ ವಜಾಗೊಳಿಸುವ ಶಿಸ್ತು ಪ್ರಾಧಿಕಾರ ದಂಡನೆಯು ತಪ್ಪಿ ತನ್ನ ನೌಕರರ ವಿರುದ್ಧ ಹೊರಿಸಲಾದ ಆರೋಪಗಳಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣಕ್ಕಿಂತಲೂ ಹೆಚ್ಚಿನದ್ದಾಗಿದೆ ಎಂಬ ಅಭಿಪ್ರಾಯದೊಂದಿಗೆ ವಜಾ ಆದೇಶವನ್ನು ರದ್ದುಗೊಳಿಸಿ ಭಾಗಶಃ ವೇತನದೊಂದಿಗೆ ರಿಟ್ ಅರ್ಜಿದಾರರನ್ನು ಸೇವೆಗೆ ಮರು ನಿಯುಕ್ತಿಗೊಳಿಸುವಂತೆ ಆದೇಶಿಸಿತು.
ಏಕ ಸದಸ್ಯ ನ್ಯಾಯಪೀಠವು ನೀಡಿದ ಆದೇಶದಿಂದ ಭಾದಿತರಾದ ಸರಕಾರವು ಗುವಾಹಟಿ ಹೈಕೋರ್ಟಿನ ವಿಭಾಗೀಯ ನ್ಯಾಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿ ಹಿಡಿದ ವಿಭಾಗೀಯ ನ್ಯಾಯಪೀಠವು ಕೇಂದ್ರ ಸರಕಾರವು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿತು.
ಗುವಾಹಟಿ ಹೈಕೋರ್ಟಿನ ವಿಭಾಗೀಯ ನ್ಯಾಯಪೀಠದ ಆದೇಶದಿಂದ ಬಾಧಿತರಾದ ಸರಕಾರ/ಶಿಸ್ತು ಪ್ರಾಧಿಕಾರವು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಿವಿಲ್ ಮೇಲ್ಮನವಿ ಸಂಖ್ಯೆ 7933/2024 ಅನ್ನು ದಾಖಲಿಸಿತು. ಮೇಲ್ಮನವಿಯಲ್ಲಿ ನೌಕರರನ್ನು ಸೇವೆಯಿಂದ ವಜಾ ಗೊಳಿಸಿದ ಆದೇಶ ಸಮರ್ಥನೀಯವೇ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿತು. ಆಪಾದಿತ ಕಾನ್ಸ್ ಟೇಬಲ್ ಶಿಶು ಪಾಲ್ ಯಾನೆ ಶಿವಪಾಲ್ ಅವರು ಉದ್ದೇಶಪೂರ್ವಕವಾಗಿ ವಾಸ್ತವಿಕ ಸಂಗತಿಗಳನ್ನು ಮರೆಮಾಚಿರುವುದು ಆತನನ್ನು ಸೇವೆಯಿಂದ ವಜಾಗೊಳಿಸುವ ಆದೇಶವನ್ನು ಸಮರ್ಥಿಸುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಕಾನೂನು ಮತ್ತು ಸುರಕ್ಷತೆ ಕಾಪಾಡುವ ಸಂಸ್ಥೆಗಳು ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಗಮನಿಸಿದ ಸುಪ್ರೀಂ ಕೋರ್ಟ್, ಮಾಹಿತಿ ಬಹಿರಂಗ ಪಡಿಸುವಿಕೆಯಲ್ಲಿನ ಸಣ್ಣಪುಟ್ಟ ಲೋಪಗಳು ಸಹ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸಬಹುದು. ಉದ್ಯೋಗ ಪರಿಶೀಲನೆಯಲ್ಲಿ ಪೂರ್ಣ ಮತ್ತು ಸತ್ಯವಾದ ಮಾಹಿತಿಗಳ ಬಹಿರಂಗಪಡಿಸುವಿಕೆ ಕಡ್ಡಾಯವಾಗಿದೆ. ಉದ್ಯೋಗದಾತರು ಲೋಪಗಳ ಸ್ವರೂಪ ಮತ್ತು ಗಂಭೀರತೆಯನ್ನು ಮೌಲ್ಯಮಾಪನ ಮಾಡಬೇಕು. ಸಮಗ್ರತೆಯ ಮಾನದಂಡಗಳು ಪಾತ್ರಗಳ ಸೂಕ್ಷ್ಮತೆಗೆ ಹೊಂದಿಕೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಬಳಿಕ ಸುಪ್ರೀಂಕೋರ್ಟ್ ನ ವಿಭಾಗೀಯ ನ್ಯಾಯಪೀಠವು ಗುವಾಹಾಟಿ ಹೈಕೋರ್ಟಿನ ತೀರ್ಪನ್ನು ರದ್ದುಪಡಿಸಿ ಆಪಾದಿತ ಕಾನ್ಸ್ ಟೇಬಲ್ ಶಿಶು ಪಾಲ್ ಯಾನೆ ಶಿವಪಾಲ್ ನನ್ನು ಸೇವೆಯಿಂದ ವಜಾಗೊಳಿಸಿದ ಶಿಸ್ತು ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ಎತ್ತಿ ಹಿಡಿಯುವ ಮೂಲಕ ತೀರ್ಪು ಪ್ರಕಟಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
