ಜಾಮೀನು ಪಡೆದ ನಂತರವೂ ಮುಂಜಾಗ್ರತಾ ಕ್ರಮವಾಗಿ ಆರೋಪಿಯ ಬಂಧನ ಸರಿಯೇ? ತಪ್ಪೇ? ಸುಪ್ರೀಂ ತೀರ್ಪೇನು?
ನವದೆಹಲಿ: ಜಾಮೀನಿನ ನಂತರವೂ ಆರೋಪಿಯನ್ನ ಮುಂಜಾಗ್ರತಾ ಕ್ರಮವಾಗಿ ಬಂಧಿಸುವುದು ಕಾನೂನಿನ ದುರುಪಯೋಗವಾಗುತ್ತದೆ. ಇದು ಸಂವಿಧಾನಕ್ಕೆ ಅಪವಾದವಾದಂತೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಮನಮೋಹನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಆರೋಪಿಗೆ ಮಂಜೂರಾಗಿರುವ ಜಾಮೀನು ರದ್ದುಗೊಳಿಸುವುದಕ್ಕೆ ಆ ಜಾಮೀನಿಗೆ ನೀಡಲಾದ ಷರತ್ತುಗಳ ಉಲ್ಲಂಘನೆಯು ಆಧಾರವಾಗಬಹುದು. ಆದರೆ ಆರೋಪಿಯ ಮುನ್ನೆಚ್ಚರಿಕೆ ಕ್ರಮವಾಗಿ ಆರೋಪಿಯನ್ನು ಬಂಧಿಸುವುದಕ್ಕೆ ಇದು ಆಧಾರ ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಆರೋಪಿಗೆ ಜಾಮೀನು ದೊರೆತ ನಂತರವೂ ಅವರನ್ನು ಜೈಲಿನಲ್ಲಿ ಇಡುವುದು ಕಾನೂನಿನ ದುರುಪಯೋಗವಾಗಿದ್ದು, ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮವಾಗಿ ಬಂಧನ ನಡೆಸುತ್ತಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಯಾವುದೇ ಆರೋಪಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುವ ಅವಕಾಶವು ಪ್ರಭುತ್ವದ ಕೈಯಲ್ಲಿ ಇರುವ ಅಸಾಧಾರಣ ಅಧಿಕಾರ. ಈ ಅಧಿಕಾರವನ್ನು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಮುಂಜಾಗ್ರತಾ ಕ್ರಮವಾಗಿ ನಡೆಯುವ ಬಂಧನವು ಸಂವಿಧಾನಕ್ಕೆ ಅಪವಾದವಾಗಿದೆ. ನಿಯಮಿತ ಅಪರಾಧಿಕ ಪ್ರಕ್ರಿಯೆಗೆ ಇದು ಪರ್ಯಾಯವಲ್ಲ ಎಂದು ನ್ಯಾಯಪೀಠ ಹೇಳಿದೆ.
ಏನಿದು ಘಟನೆ…
ಕೇರಳ ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯಿದೆ 2007 ಸೆಕ್ಷನ್ 3ರ ಅಡಿಯಲ್ಲಿ ಕೇರಳ ಮೂಲದ ಖಾಸಗಿ ಸಾಲದಾತರಾಗಿದ್ದ ರಾಜೇಶ್ ಎಂಬವರನ್ನು ಕುಖ್ಯಾತ ಗೂಂಡಾ ಎಂಬ ಹಣೆಪಟ್ಟಿ ಹಚ್ಚಿ ಪಾಲಕ್ಕಾಡ್ ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿತ್ತು. ಬಂಧನದ ವಿರುದ್ದ ರಾಜೇಶ್ ಅವರ ಪತ್ನಿ ಧನ್ಯ ಎಂ. ಕೇರಳ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೈಕೋರ್ಟ್ ನ ಈ ಆದೇಶ ಪ್ರಶ್ನಿಸಿ ರಾಜೇಶ್ ಅವರ ಪತ್ನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅಪರಾಧ ಕೃತ್ಯಗಳು ಸಂಭವಿಸಬಹುದು ಎಂಬ ನಿರೀಕ್ಷೆಯಿಂದ ಯಾವುದೇ ವ್ಯಕ್ತಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದಲ್ಲಿ ಅದು ಆತನ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತೆ ಆಗುತ್ತದೆ. ಕಾನೂನಿನಲ್ಲಿ ಇರುವ ಈ ಅವಕಾಶವನ್ನು ಸಾಮಾನ್ಯ ಸಂದರ್ಭಗಳಲ್ಲಿ ಬಳಕೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
