ಸುಪ್ರೀಂ ಮಧ್ಯ ಪ್ರವೇಶ: ಒಂಟಿ ಪೋಷಕರಾಗಿದ್ದ ಜಡ್ಜ್ ಗೆ ‘ಮಗುವಿನ ಆರೈಕೆ ರಜೆ’ ಮಂಜೂರು
ಜಾರ್ಖಂಡ್: ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕ ಒಂಟಿ ಪೋಷಕರಾಗಿದ್ದ ಜಿಲ್ಲಾ ನ್ಯಾಯಾಧೀಶರೊಬ್ಬರಿಗೆ ಮಗುವಿನ ಆರೈಕೆಗೆ ರಜೆ ಮಂಜೂರಾಗಿದೆ.
ಹೌದು, ಜಿಲ್ಲಾ ನ್ಯಾಯಾಧೀಶರರೊಬ್ಬರು ತಮ್ಮ ಮಗುವಿನ ಆರೈಕೆಗೆ ಕೋರಿ ಸಲ್ಲಿಸಿದ್ದ ರಜೆ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಭಾಗಶಃ ಪುರಸ್ಕರಿಸಿದೆ. ಜಿಲ್ಲಾ ನ್ಯಾಯಾಧೀಶೆ ಕಾಶಿಕಾ ಪ್ರಸಾದ್ ಮಕ್ಕಳ ಆರೈಕೆಗೆ ರಜೆ ಕೋರಿದ್ದರು . ಆದರೆ, ಈ ರಜೆಯನ್ನು ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಶಿಕಾ ಪ್ರಸಾದ್ ಅವರು ರಜೆ ನಿರಾಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ಹಿಂದಿನ ವಿಚಾರಣೆಯ ವೇಳೆ, ರಜೆ ಕೋರಿದ್ದ ಅರ್ಜಿಯನ್ನು ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್ಗೆ ಸೂಚನೆ ನೀಡಿತ್ತು, ಮತ್ತು ವರದಿಯನ್ನು ನೀಡುವಂತೆ ಕೇಳಿತ್ತು. ಇದೀಗ, ಹೈಕೋರ್ಟ್ ಡಿಸ್ಟ್ರಿಕ್ಟ್ ಜಡ್ಜ್ ಅವರಿಗೆ ಮಕ್ಕಳ ಆರೈಕೆ ರಜೆಯನ್ನು ಮಂಜೂರು ಮಾಡಿದ್ದರೂ ಅದು ಅರ್ಜಿಯಲ್ಲಿ ಕೋರಲಾಗಿದ್ದ ದಿನಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಜಡ್ಜ್ ಕಾಶಿಕಾ ಪ್ರಸಾದ್ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
194 ದಿನಗಳ ರಜೆ ಕೇಳಿದ್ದರೂ ಹೈಕೋರ್ಟ್ 92 ದಿನಗಳ ರಜೆಯನ್ನಷ್ಟೇ ಮಂಜೂರು ಮಾಡಿದೆ ಎಂದು ಮಾಹಿತಿ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ತನಗೆ ಸಂಬಂಧಿಸಿದ ವಾರ್ಷಿಕ ಗೌಪ್ಯತಾ ವರದಿಯಲ್ಲಿ ಪ್ರತಿಕೂಲ ಟೀಕೆ ಮಾಡಲಾಗಿದೆ. ನ್ಯಾಯಾಧೀಶೆಯ ಕಾರ್ಯಕ್ಷಮತೆಯ ವರದಿಯ ಬಗ್ಗೆ ಕಳೆದ ವಿಚಾರಣೆಯ ವೇಳೆ ನ್ಯಾಯಪೀಠಕ್ಕೆ ವಿವರಣೆ ನೀಡಲಾಗಿದೆ ಎಂಬುದನ್ನು ಜಡ್ಜ್ ಪರ ವಕೀಲರು ಗಮನ ಸೆಳೆದರು. ಈ ಬಗ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿತು.
ಜಾರ್ಖಂಡ್ ಹೈಕೋರ್ಟ್ ಆಡಳಿತಾತ್ಮಕ ವಿಭಾಗದ ಪರ ವಾದ ಮಂಡಿಸಿದ ವಕೀಲರು, ನ್ಯಾಯಾಧೀಶರಿಗೆ ವಿಸ್ತೃತ ರಜೆ ನೀಡುವುದು ಸಮರ್ಥನೀಯವಲ್ಲದ ಪೂರ್ವನಿದರ್ಶನವನ್ನು ಹುಟ್ಟು ಹಾಕಬಹುದು ಎಂದು ವಾದಿಸಿದರು. ಅಲ್ಲದೆ, ವರ್ಗಾವಣೆ ಆದೇಶದ ಕಾರಣಕ್ಕೆ ಪ್ರಸ್ತುತ ಮೊಕದ್ದಮೆಯನ್ನು ಹೂಡಲಾಗಿದೆ ಎಂದು ತಿಳಿಸಿದರು.
ವಾದ ಆಲಿಸಿದ ಸುಪ್ರೀಂ ಕೋರ್ಟ್, ಮಂಜೂರು ಮಾಡಲಾದ 92 ದಿನಗಳ ರಜೆಯನ್ನು ಈಗ ಮುಂದುವರಿಸಬಹುದು ಎಂದು ಹೇಳಿ ಹೈಕೋರ್ಟ್ ನಾಲ್ಕು ವಾರಗಳಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
