07/03/2026

Law Guide Kannada

Online Guide

ಕಾನೂನು ಅಭಿಪ್ರಾಯ ನೀಡುವ ವಕೀಲರಿಗೆ ಸಮನ್ಸ್: ನ್ಯಾಯಾಡಳಿತಕ್ಕೆ ಬೆದರಿಕೆ ಒಡ್ಡಿದಂತೆ -ಸುಪ್ರೀಂಕೋರ್ಟ್

ನವದೆಹಲಿ: ನ್ಯಾಯದಾನಕ್ಕೆ ನೇರವಾಗಿ ಅಡ್ಡಿಪಡಿಸುವ ಕಾರಣ ಕಕ್ಷಿದಾರರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ಅಭಿಪ್ರಾಯ ನೀಡುವ ವಕೀಲರಿಗೆ ಸಮನ್ಸ್ ಜಾರಿ ಮಾಡಲು ತನಿಖಾ ಸಂಸ್ಥೆಗಳಿಗೆ ಅನುಮತಿಸಲಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ್ದಕ್ಕಾಗಿ ವಕೀಲರಿಗೆ ನೇರವಾಗಿ ಸಮನ್ಸ್ ಜಾರಿ ಮಾಡುವುದಕ್ಕೆ ಪೊಲೀಸರು ಅಥವಾ ತನಿಖಾ ಸಂಸ್ಥೆಗಳಿಗೆ ಅನುಮತಿ ನೀಡುವುದರಿಂದ ನ್ಯಾಯಾಡಳಿತ ವ್ಯವಸ್ಥೆಗೆ ಬೆದರಿಕೆ ಒಡ್ಡಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ವಕೀಲ ವೃತ್ತಿಯು ನ್ಯಾಯದಾನ ವ್ಯವಸ್ಥೆಯ ಅವಿಭಾಜ್ಯ ಘಟಕ. ಆದರೆ, ವಕೀಲರಿಗೆ ಹೀಗೆ ನೇರವಾಗಿ ಸಮನ್ಸ್ ನೀಡುವ ಕ್ರಮವು ಈ ವೃತ್ತಿಯ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಕೆ.ವಿ.ವಿಶ್ವನಾಥನ್ ಹಾಗೂ ಎನ್.ಕೋಟಿಶ್ವರ್ ಸಿಂಗ್ ಅವರು ಇದ್ದ ನ್ಯಾಯಪೀಠ ಹೇಳಿದೆ.

ಕಕ್ಷಿದಾರರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆ ನೀಡಿದ್ದ ತಮಗೆ ಸಮನ್ಸ್ ಜಾರಿಗೊಳಿಸಿದ ಗುಜರಾತ್ ಪೊಲೀಸರ ಕ್ರಮ ಪ್ರಶ್ನಿಸಿ ವಕೀಲರೊಬ್ಬರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್, ಅವರಿಗೆ ನೀಡಿದ್ದ ನೋಟಿಸ್ ರದ್ದುಗೊಳಿಸಲು ನಿರಾಕರಿಸಿ ಮಾರ್ಚ್ನಲ್ಲಿ ಆದೇಶಿಸಿತ್ತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ವಕೀಲರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಮುಂದಿನ ಆದೇಶದವರೆಗೆ ಅರ್ಜಿದಾರನಿಗೆ ಯಾವುದೇ ಸಮನ್ಸ್ ನೀಡಬಾರದು ಎಂದು ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ.

ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡುವಂತೆ, ಭಾರತ ವಕೀಲರ ಪರಿಷತ್ತು, ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್ಸಿಬಿಎ) ಹಾಗೂ ಸುಪ್ರೀಂ ಕೋರ್ಟ್ನಲ್ಲಿ ವಕಾಲತ್ತು ವಹಿಸುವ ವಕೀಲರ ಸಂಘದ (ಎಸ್ಸಿಎಒಆರ್ಎ) ಅಧ್ಯಕ್ಷರು, ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿತು.

ಜೊತೆಗೆ, ಸೂಕ್ತ ನಿರ್ದೇಶನ ನೀಡುವುದಕ್ಕಾಗಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಜೆಐ ಅವರ ಮುಂದೆ ಮಂಡಿಸುವಂತೆಯೂ ನ್ಯಾಯಪೀಠ ಆದೇಶಿಸಿದೆ.

ಪ್ರಕರಣದಲ್ಲಿ ಕೇವಲ ವಕೀಲರಾಗಿ ಕಕ್ಷಿದಾರರಿಗೆ ಸಲಹೆ ನೀಡುತ್ತಿರುವಾಗ ತನಿಖಾ ಸಂಸ್ಥೆ, ಪ್ರಾಸಿಕ್ಯೂಷನ್ ಇಲ್ಲವೇ ಪೊಲೀಸರು ನೇರವಾಗಿ ಆ ವಕೀಲರಿಗೇ ಸಮನ್ಸ್ ನೀಡಬಹುದೇ? ಮತ್ತು ಪ್ರಕರಣವೊಂದರಲ್ಲಿ ವಕೀಲರಷ್ಟೇ ಆಗಿರದೆ ಅದಕ್ಕೂ ಮಿಗಿಲಾದ ಪಾತ್ರ ನಿರ್ವಹಿಸಿದ ಬಗ್ಗೆ ತನಿಖಾ ಸಂಸ್ಥೆಗೆ ತಿಳಿದಿದ್ದರೆ ಅಂತಹ ಅಸಾಧಾರಣ ಸ್ಥಿತಿಯಲ್ಲಿ ತನಿಖಾ ಸಂಸ್ಥೆಗಳು ನೇರವಾಗಿ ಸಮನ್ಸ್ ಜಾರಿ ಮಾಡಬೇಕೆ ಅಥವಾ ನ್ಯಾಯಾಂಗ ಮೇಲ್ವಿಚಾರಣೆಗೆ ಸೂಚಿಸಬೇಕೆ ಎಂಬ ಎರಡು ಪ್ರಮುಖ ಪ್ರಶ್ನೆಗಳ ಕುರಿತು ವಿಚಾರಣೆ ನಡೆಯಲಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.