07/03/2026

Law Guide Kannada

Online Guide

ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡಲು ನಿರ್ಬಂಧ: ಲಸಿಕೆ ಪಡೆದ ಶ್ವಾನಗಳಿಗೆ ಮಾತ್ರ ಬಿಡುಗಡೆ ಭಾಗ್ಯ – ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ದೆಹಲಿಯಲ್ಲಿ ವಿಪರೀತವಾದ ಶ್ವಾನ ಕಾಟದ ಹಿನ್ನೆಲೆಯಲ್ಲಿ ದೇಶದ ರಾಜಧಾನಿಯನ್ನು ಬೀದಿನಾಯಿಗಳಿಂದ ಮುಕ್ತ ಮಾಡುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಕೊಂಚ ಮಾರ್ಪಾಡು ಮಾಡಿದೆ.

ಹೌದು, ಬೀದಿ ನಾಯಿಗಳಿಗೆ ಲಸಿಕೆ, ಸಂತಾನ ಹರಣ ಚಿಕಿತ್ಸೆ ಮಾಡಿಸಿ ಬಳಿಕ ಹೊರಗೆ ಬಿಡಬಹುದು. ಆಕ್ರಮಣಕಾರಿ ಬೀದಿನಾಯಿಗಳನ್ನು ಮಾತ್ರ ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಮಾಡಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ರಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದನ್ನು ನಿರ್ಬಂಧಿಸಲಾಗಿದ್ದು, ಲಸಿಕೆ ಹಾಕಿದ ನಾಯಿಗಳಿಗೆ ಮಾತ್ರ ಬಿಡುಗಡೆಯ ಭಾಗ್ಯ ದೊರೆತಿದೆ.

ಪ್ರಾಣಿ ಪ್ರಿಯರು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿರುವ ಈ ಆದೇಶ, ಅರ್ಜಿಯ ವಿಚಾರಣೆಗಾಗಿ ಠೇವಣಿ ಇಡುವಂತೆ ಸೂಚಿಸಿದೆ. ಶ್ವಾನ ಪ್ರಿಯರಿಗೆ ವೈಯಕ್ತಿಕವಾಗಿ 25000/- ಸರ್ಕಾರೇತರ ಸಂಸ್ಥೆಗಳಿಗೆ 2 ಲಕ್ಷ ರೂ.ಗಳ ಠೇವಣಿ ಇಡುವಂತೆ ಸೂಚಿಸಿದೆ. ಠೇವಣಿ ಇಡದಿದ್ದರೆ ಅಂಥವರು ವಿಚಾರಣೆಯಲ್ಲಿ ಭಾಗಿಯಾಗುವಂತಿಲ್ಲ.

ಆಕ್ರಮಣಕಾರಿ ನಡವಳಿಕೆ ಅಥವಾ ರೇಬಿಸ್ ಸೋಂಕಿಗೆ ತುತ್ತಾದ ನಾಯಿಗಳನ್ನು ಶ್ವಾನಾಶ್ರಯ ಕೇಂದ್ರಗಳಿಂದ ಮುಕ್ತಗೊಳಿಸದಂತೆ ತ್ರಿಸದಸ್ಯ ನ್ಯಾಯಪೀಠ ಆದೇಶಿಸಿದೆ. ನಾಯಿಗಳಿಗೆ ಇನ್ನು ಮುಂದೆ ಸಾರ್ವಜನಿಕವಾಗಿ ಆಹಾರ ನೀಡುವಂತಿಲ್ಲ. ಇದಕ್ಕಾಗಿ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ದೆಹಲಿ ಹಾಗೂ ಎನ್ಸಿಆರ್ ನಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ದೆಹಲಿ-ಎನ್ಸಿಆರ್ ನ ಸುತ್ತಮುತ್ತಲಿನಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ನಿರ್ದೇಶಿಸಿತ್ತು.

ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವ ಅಥವಾ ರೇಬೀಸ್ ಸೋಂಕಿಗೆ ಒಳಗಾದ ನಾಯಿಗಳಿಗೆ ಮೊದಲು ಲಸಿಕೆ ಹಾಕಬೇಕು. ಆರೈಕೆ ಕೇಂದ್ರಗಳಲ್ಲಿ ನಾಯಿಗಳನ್ನು ಕೂಡಿಹಾಕುವಂತಿಲ್ಲ. ಆಕ್ರಮಣಕಾರಿ ನಾಯಿಗಳನ್ನು ಮಾತ್ರ ಶೆಲ್ಟರ್ ಗಳಲ್ಲಿ ಇಡಬೇಕು. ಸಾರ್ವಜನಿಕವಾಗಿ ನಾಯಿಗಳಿಗೆ ಆಹಾರ ಹಾಕಬಾರದು ನಿರ್ದಿಷ್ಟ ಸ್ಥಳದಲ್ಲಿ ಆಹಾರ ಹಾಕಬೇಕು , ನಾಯಿಯನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ನೀಡಬೇಕು. ಪ್ರಾಣಿಪ್ರಿಯರು ಶ್ವಾನಗಳನ್ನು ದತ್ತು ಪಡೆಯಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.