ಬಲು ಅಪರೂಪ ಪ್ರಕರಣಗಳಲ್ಲಿ ಮಾತ್ರ ಮರಣ ದಂಡನೆ ಶಿಕ್ಷೆ ವಿಧಿಸಿ – ಸುಪ್ರೀಂಕೋರ್ಟ್
ನವದೆಹಲಿ: ವಸ್ತುಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಬಲು ಅಪರೂಪದ ಪ್ರಕರಣದಲ್ಲಿ ಮಾತ್ರ ಮರಣದಂಡನೆ ಶಿಕ್ಷೆ ವಿಧಿಸಬಹುದು ಎಂದು ಹೈಕೋರ್ಟ್, ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ಶರದ್ ಬಿರ್ದಿಚಂದ್ ಶರ್ದ ವಿರುದ್ಧ ಮಹಾರಾಷ್ಟ್ರ ರಾಜ್ಯ’ ಪ್ರಕರಣದಲ್ಲಿ ನೀಡಲಾದ ಮಾರ್ಗದರ್ಶಿ ಸೂತ್ರಗಳಂತೆ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣಗಳಿಗೆ ಅಗತ್ಯವಿರುವ ಕಠಿಣ ಮಾನದಂಡಗಳನ್ನು ಅನ್ವಯಿಸಬೇಕು ಎಂದು ನ್ಯಾಯಪೀಠ ಹೇಳಿದೆ.
2014ರಲ್ಲಿ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದ ಅರ್ ಅಲಿಗೆ ಮರಣದಂಡನೆ ಮತ್ತು ಪ್ರೇಮ್ ಪಾಲ್ ವರ್ಮಾನಿಗೆ ಜೀವಾವಧಿ ಶಿಕ್ಷೆ ನೀಡಿದ್ದ ನೈನಿತಾಲ್ ವಿಚಾರಣಾ ನ್ಯಾಯಾಲಯ ಶಿಕ್ಷೆಯನ್ನು ರದ್ದುಪಡಿಸಿದೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಉತ್ತರಾಖಂಡ್ ಹೈಕೋರ್ಟ್ ಎತ್ತಿ ಹಿಡಿದಿತ್ತು.
ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳು ಅಪರಾಧಿಯನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸುವ ಮೊದಲು ವಸ್ತುಸ್ಥಿತಿಯನ್ನು ಸೂಕ್ಷ್ಮವಾಗಿ ಸಮಾಧಾನಚಿತ್ತದಿಂದ ಪರಿಶೀಲಿಸಬೇಕು. ಪ್ರಾಸಿಕ್ಯೂಷನ್ ದೋಷಾರೋಪಣೆ ಮಾಡಲು ಸಾಧ್ಯವಾಗದೇ ಇದ್ದಾಗ ಹಾಗೂ ನ್ಯಾಯಸಮ್ಮತವೂ ಸಮರ್ಥನೀಯವೂ ಆದ ಸಾಕ್ಷ್ಯಗಳನ್ನು ಒದಗಿಸಿದಾಗ ಅಪರೂಪದಲ್ಲಿ ಅಪರೂಪ ಎನ್ನುವಂತಹ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ವಿಧಿಸಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
