ನ್ಯಾಯಮಂಡಳಿ ಸುಧಾರಣೆ ಕಾಯ್ದೆ: ಕೇಂದ್ರದ ವಿರುದ್ದ ಗರಂ ಆದ ಸುಪ್ರೀಂ
ನವದೆಹಲಿ: ನ್ಯಾಯಮಂಡಳಿ ಸುಧಾರಣೆ ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ವಿರುದ್ದ ಸುಪ್ರೀಂಕೋರ್ಟ್ ಗರಂ ಆದ ಪ್ರಸಂಗ ನಡೆಯಿತು.
ನ್ಯಾಯಮಂಡಳಿ ಸುಧಾರಣೆಗಳು (ಸರಳೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ಕೋರಿತ್ತು. ಈ ಕುರಿತು ವಿಚಾರಣೆ ನಡೆಸಿ ಸಿಟ್ಟಿಗೆದ್ದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪೀಠವು, ‘ಕೇಂದ್ರ ಸರ್ಕಾರದ ಇಂಥ ತಂತ್ರಗಳನ್ನು ನಾವು ಒಪ್ಪುವುದಿಲ್ಲ’ ಎಂದು ಎಚ್ಚರಿಕೆ ನೀಡಿತು. ‘ಈ ಅರ್ಜಿಗಳ ವಿಚಾರಣೆಯನ್ನು ನಮ್ಮ ಈ ಪೀಠ ನಡೆಸುವುದು ಕೇಂದ್ರ ಸರ್ಕಾರಕ್ಕೆ ಇಷ್ಟವಿದ್ದಂತೆ ಕಾಣುತ್ತಿಲ್ಲ. ಆದ್ದರಿಂದ ನಮ್ಮನ್ನು ತಪ್ಪಿಸಿ ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಕೇಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
‘ಬೇರೆ ಪ್ರಕರಣಗಳಲ್ಲಿ ಅಟಾರ್ನಿ ಜನರಲ್ ಅವರು ವ್ಯಸ್ತರಾಗಿದ್ದಾರೆ. ಆದ್ದರಿಂದ ವಿಚಾರಣೆಯನ್ನು ಮುಂದೂಡಿ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಪೀಠಕ್ಕೆ ಮನವಿ ಮಾಡಿದರು. ‘ಈ ರೀತಿಯ ವರ್ತನೆ ಸರಿಯಲ್ಲ. ನಾವು ಅವರಿಗೆ ಸಾಕಷ್ಟು ಸಮಯ ನೀಡಿದ್ದೇವೆ’ ಎಂದು ಸಿಜೆಐ ಬಿಆರ್ ಗವಾಯಿ ನುಡಿದರು.
2021ರಂದು ನ್ಯಾಯಮಂಡಳಿ ಸುಧಾರಣೆ ಕಾಯ್ದೆ ಜಾರಿಗೊಂಡಿದ್ದು, ಈ ಕಾಯ್ದೆಯ ಅನ್ವಯ, ಹಲವು ರೀತಿಯ ನ್ಯಾಯಮಂಡಳಿಗಳು ರದ್ದಾಗಿವೆ. ಈ ನ್ಯಾಯಮಂಡಳಿಗಳ ನ್ಯಾಯಾಂಗ ಮತ್ತು ಇತರ ಸದಸ್ಯರ ನೇಮಕ ಮತ್ತು ಕಾರ್ಯಾವಧಿಯಲ್ಲಿ ಹಲವು ಬದಲಾವಣೆಗಳನ್ನು ಈ ಕಾಯ್ದೆ ಮಾಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
