06/03/2026

Law Guide Kannada

Online Guide

ರಸ್ತೆ ಅಪಘಾತದಲ್ಲಿ ಸಾವು ಸಂಭವಿಸಿದ್ರೆ ಜೈಲು ಶಿಕ್ಷೆ ಕಡ್ಡಾಯವೇ..? ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ

ನವದೆಹಲಿ: ರಸ್ತೆ ಅಪಘಾತದಿಂದ ಸಾವು ಸಂಭವಿಸಿದ್ದಲ್ಲಿ ಐಪಿಸಿ ಸೆಕ್ಷನ್ 304A ಅಡಿಯಲ್ಲಿ ಜೈಲು ಶಿಕ್ಷೆ ಕಡ್ಡಾಯವೇ? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

13 ವರ್ಷದ ಬಾಲಕನ ಸಾವಿಗೆ ಕಾರಣವಾದ ರಸ್ತೆ ಅಪಘಾತ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಮೂರು ತಿಂಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿ, ಜೈಲು ಶಿಕ್ಷೆ ಪ್ರತಿಯೊಂದು ಪ್ರಕರಣದಲ್ಲೂ ಕಡ್ಡಾಯವಲ್ಲ ಎಂದು ಸ್ಪಷ್ಟ ತೀರ್ಪು ನೀಡಿದೆ. ಹಾಗೆಯೇ ಶಿಕ್ಷೆಯ ಬದಲಿಗೆ ಸಂತ್ರಸ್ಥ ಕುಟುಂಬಕ್ಕೆ 3 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.

ಅಬ್ದುಲ್ ಸತ್ತಾರ್ ಎಂಬುವವರು ಸಲ್ಲಿಸಿದ್ದ ಪುನರ್ ವಿಮರ್ಶಾ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠವು. ರಸ್ತೆ ಅಪಘಾತದಲ್ಲಿ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಐಪಿಸಿ ಸೆಕ್ಷನ್ 304(A) ಅಡಿಯಲ್ಲಿ ಜೈಲು ಶಿಕ್ಷೆಗೆ ಬದಲಾಗಿ ಪರಿಹಾರ ಮೊತ್ತವನ್ನು ಪಾವತಿಸಲು ಸೂಚಿಸಿತು.

ಅಜಾಗರೂಕ ಅಥವಾ ನಿರ್ಲಕ್ಷ್ಯ ಕೃತ್ಯದಿಂದ ಸಾವಿಗೆ ಕಾರಣವಾಗುವ ಬಗ್ಗೆ ಇರುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304(A) (ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106ಕ್ಕೆ ಹೊಂದಿಕೊಳ್ಳುತ್ತದೆ) ಪ್ರತಿಯೊಂದು ಪ್ರಕರಣದಲ್ಲೂ ಜೈಲು ಶಿಕ್ಷೆ ವಿಧಿಸುವುದನ್ನು ಕಡ್ಡಾಯಗೊಳಿಸುವುದಿಲ್ಲ ಎಂದು ತಿಳಿಸಿದ ನ್ಯಾಯಪೀಠವು, ಆರೋಪಿಗೆ ವಿಧಿಸಲಾಗಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸುವುದರಿಂದ ವಿನಾಯಿತಿ ನೀಡಿ, ಮೃತ ಬಾಲಕನ ಕುಟುಂಬಕ್ಕೆ 3 ಲಕ್ಷ ಪರಿಹಾರ ಪಾವತಿಸುವ ಷರತ್ತಿನೊಂದಿಗೆ ಅವಕಾಶ ನೀಡಿತು.

11 ಮಾರ್ಚ್ 2024 ರಂದು, ಕರ್ನಾಟಕ ಹೈಕೋರ್ಟ್ 5 ಅಕ್ಟೋಬರ್ 2023ರಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು. ಹೈಕೋರ್ಟ್ ಅವರು ಐಪಿಸಿ ಸೆಕ್ಷನ್ಗಳು 279 (ಬಿಎನ್ಎಸ್ ಸೆಕ್ಷನ್ 281), 337 (ಬಿಎನ್ಎಸ್ ಸೆಕ್ಷನ್ 125(ಚa)), 338 (ಬಿಎನ್ಎಸ್ ಸೆಕ್ಷನ್125(b)) ಮತ್ತು 304(4) ಅಡಿಯಲ್ಲಿ ಆರೋಪಿಯ ದೋಷಾರೋಪಣೆಯನ್ನು ದೃಢಪಡಿಸಿತ್ತು. ಸೆಕ್ಷನ್ 304(A) ಅಡಿಯಲ್ಲಿ ಶಿಕ್ಷೆಯನ್ನು ಆರು ತಿಂಗಳಿಂದ ಮೂರು ತಿಂಗಳಿಗೆ ಕಡಿತಗೊಳಿಸಿದ್ದರೂ, ದಂಡವನ್ನು 5,000 ರೂ.ನಿಂದ 10,000 ರೂ.ಗೆ ಹೆಚ್ಚಿಸಿತ್ತು.

ಪುನರ್ ವಿಮರ್ಶಾ ಹಂತದಲ್ಲಿ ವಿಷಯ ಬಂದಾಗ, ಅರ್ಜಿದಾರನು ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಪಾವತಿಸಲು ಸಮ್ಮತಿಸಿದನು. ಈ ಸೀಮಿತ ವಿಷಯದ ಮೇಲೆ ಕೋರ್ಟ್ ನೋಟಿಸ್ ನೀಡಿತು. ಬಳಿಕ ವಿಮರ್ಶಾ ಅರ್ಜಿಯನ್ನು ಅನುಮತಿಸಿ, ವಿಶೇಷ ಅನುಮತಿ ಅರ್ಜಿಯನ್ನು ಮೂಲ ಸಂಖ್ಯೆಗೆ ಮರುಸ್ಥಾಪಿಸಿ ವಿಚಾರಣೆ ನಡೆಸಿತು. ಪಕ್ಷಗಳ ವಾದಗಳನ್ನು ಆಲಿಸಿದ ನಂತರ, ಅಪೀಲುದಾರನ ನಿರ್ಲಕ್ಷದಿಂದ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಆದರೆ, ಸೆಕ್ಷನ್ 304(A) ಅಡಿಯಲ್ಲಿ ಜೈಲು ಶಿಕ್ಷೆ ಕಡ್ಡಾಯವಲ್ಲ. ಉಳಿದ ಶಿಕ್ಷೆಯನ್ನು ಅನುಭವಿಸುವ ಬದಲು, ಅಪೀಲುದಾರನು ಒಟ್ಟು 3 ಲಕ್ಷ ದಂಡವನ್ನು ಪಾವತಿಸಬಹುದು ಈ ಮೊತ್ತವನ್ನು ಪರಿಹಾರವಾಗಿ ಪರಿಗಣಿಸಿ ಬಾಲಕನ ಕುಟುಂಬಕ್ಕೆ ನೀಡಬೇಕು ಎಂದು ನ್ಯಾಯಪೀಠವು ಆದೇಶಿಸಿದೆ.

ಮೈಸೂರು ನಗರದ ದೇವರಾಜ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಭಾಷಾಂತರಕಾರರೊಂದಿಗೆ ಹಾಜರಿದ್ದ ಬಾಲಕನ ಪೋಷಕರೊಂದಿಗೆ ಆನ್ ಲೈನ್ ಮೂಲಕ ಸಂವಾದ ನಡೆಸಿದ ನ್ಯಾಯಪೀಠವು, ಪೋಷಕರು ಸಂಕಷ್ಟಕರ ಪರಿಸ್ಥಿತಿಯಲ್ಲಿ ಇದ್ದು, ಬದುಕಿಗಾಗಿ ಪರಿಹಾರವನ್ನು ಸ್ವೀಕರಿಸಲು ಸಿದ್ದರಾಗಿದ್ದಾರೆ ಎಂದು ದಾಖಲಿಸಿತು. ಎಲ್ಲಾ ಸಂದರ್ಭಗಳನ್ನು ಪರಿಗಣಿಸಿ ಹಾಗೂ ಸಂವಿಧಾನದ ವಿಧಿ 142 ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿ. ಹೈಕೋರ್ಟ್ ವಿಧಿಸಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು 3 ಲಕ್ಷವನ್ನು ಎರಡು ಹಂತಗಳಲ್ಲಿ ಪಾವತಿಸುವ ಷರತ್ತಿನೊಂದಿಗೆ ಪರಿವರ್ತಿಸಲು ಆದೇಶಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ, 22 ಲಕ್ಷವನ್ನು ಒಂದು ತಿಂಗಳೊಳಗೆ ಬಾಲಕನ ಪೋಷಕರ ಖಾತೆಗೆ ಜಮಾ ಮಾಡಬೇಕು. ಉಳಿದ 21 ಲಕ್ಷವನ್ನು 6 ಏಪ್ರಿಲ್ 2026ರೊಳಗೆ ಪಾವತಿಸಬೇಕು. ಆರೋಪಿಯು ಈ ಮೊತ್ತವನ್ನು ಜಮಾ ಮಾಡಲು ವಿಫಲವಾದರೆ, ಹೈಕೋರ್ಟ್ ಆದೇಶಿಸಿದಂತೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ತೀರ್ಪು ಪ್ರಕಟಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.