19/03/2026

Law Guide Kannada

Online Guide

ಸೂಕ್ತ ಸಿದ್ಧತೆ ಇಲ್ಲದೆ PIL ಸಲ್ಲಿಕೆ: ಎಚ್ಚರಿಕೆ ಕೊಟ್ಟು ಕೆಲ ಸಲಹೆಗಳನ್ನು ನೀಡಿದ CJI ಸೂರ್ಯಕಾಂತ್

ನವದೆಹಲಿ: ಸೂಕ್ತ ಸಿದ್ಧತೆ ಇಲ್ಲದೆ ಸಂವಿಧಾನಾತ್ಮಕ ಪ್ರಕರಣಗಳನ್ನು ದಾಖಲಿಸುವುದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಗಂಭೀರತೆಯನ್ನು ಕಡಿಮೆ ಮಾಡುತ್ತದೆ ಎಂದು ಎಚ್ಚರಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ತಮ್ಮ ಕಾನೂನು ಕೌಶಲ್ಯಗಳನ್ನು ಬಲಪಡಿಸಲು ಸಮಯ ಮತ್ತು ಪರಿಶ್ರಮವನ್ನು ಮೀಸಲಿಡುವಂತೆ ಯುವವಕೀಲರೊಬ್ಬರಿಗೆ ಸಲಹೆಯನ್ನು ನೀಡಿದರು.

ಇತ್ತೀಚೆಗೆ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಕುರಿತು ವಿಚಾರಣೆ ನಡೆಯುವ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಒಬ್ಬ ಯುವ ವಕೀಲರನ್ನು ಪ್ರಶ್ನಿಸಿದಾಗ ಈ ಪ್ರಸಂಗ ನಡೆದಿದೆ.

ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಆ ವಕೀಲರ ವೃತ್ತಿಪರ ಅನುಭವದ ಬಗ್ಗೆ ಪ್ರಶ್ನಿಸಿತು. ಈ ವೇಳೆ ಯುವ ವಕೀಲರು ತಾವು ಕೇವಲ ನವೆಂಬರ್ 2025 ರಿಂದಲೇ ವಕೀಲತ್ವವನ್ನು ಪ್ರಾರಂಭಿಸಿದ್ದೇನೆ ಎಂದು ಪೀಠಕ್ಕೆ ತಿಳಿಸಿದರು. ಇದನ್ನು ಗಮನಿಸಿದ ನ್ಯಾಯಪೀಠವು, ಸಮರ್ಪಕವಾದ ಕಾನೂನು ಅಭ್ಯಾಸ ಮತ್ತು ನ್ಯಾಯಾಲಯದ ಕ್ರಮವಿಧಾನಗಳ ಅರಿವು ಸಂಪಾದಿಸದೇ ಅನುಭವವಿಲ್ಲದ ವಕೀಲರು ತುರ್ತುತನದಲ್ಲಿ ಪಿಐಎಲ್ ಗಳನ್ನು ಸಲ್ಲಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿತು.

ವಕೀಲತ್ವದ ಆರಂಭಿಕ ವರ್ಷಗಳು ಕರಡು ತಯಾರಿಕೆ (drafting), ಕಾನೂನು ಸಂಶೋಧನೆ (legal research) ಮತ್ತು ನ್ಯಾಯಾಲಯದ ಶಿಸ್ತನ್ನು ಕಾಪಾಡುವುದು courtroom discipline) ಮುಂತಾದ ಮೂಲಭೂತ ಕೌಶಲ್ಯಗಳನ್ನು ಕಲಿಯಲು ಮೀಸಲಾಗಿರಬೇಕು. ಸೂಕ್ತ ಸಿದ್ಧತೆ ಇಲ್ಲದೆ ಸಂವಿಧಾನಾತ್ಮಕ ಪ್ರಕರಣಗಳನ್ನು ದಾಖಲಿಸುವುದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಗಂಭೀರತೆಯನ್ನು ಕಡಿಮೆ ಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಆತಂಕ ವ್ಯಕ್ತಪಡಿಸಿದರು.

ಇಂತಹ ಸಮರ್ಪಕವಾಗಿ ಸಿದ್ಧವಾಗದ ಅರ್ಜಿಗಳನ್ನು ನಿರಂತರವಾಗಿ ಸಲ್ಲಿಸಲಾಗುತ್ತಿದ್ದರೆ, ವಕೀಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಹಾಗೂ ಅಗತ್ಯವಿದ್ದರೆ ವಕೀಲತ್ವ ಪರವಾನಗಿಯನ್ನು ಅಮಾನತುಗೊಳಿಸುವುದನ್ನೂ ಪರಿಗಣಿಸಬಹುದು ಎಂದು ಸಿಜೆೈ ಸೂರ್ಯಕಾಂತ್ ಎಚ್ಚರಿಸಿದರು.

ಸಂಭಾಷಣೆ ವೇಳೆ ಮುಖ್ಯ ನ್ಯಾಯಮೂರ್ತಿಯವರು ಆ ವಕೀಲರು ಯಾವ ರಾಜ್ಯದವರು ಎಂದು ಕೂಡ ಪ್ರಶ್ನಿಸಿದ್ದು, ಅವರು ಬಿಹಾರ ರಾಜ್ಯದವರು ಎಂದು ತಿಳಿದ ನಂತರ, ಬಿಹಾರ ರಾಜ್ಯವು ಹೋರಾಟದ ಮನೋಭಾವ ಮತ್ತು ಕಠಿಣ ಪರಿಶ್ರಮಕ್ಕಾಗಿ ಪ್ರಸಿದ್ಧವಾಗಿದೆ ಎಂದು ಹೇಳಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಗಳೊಂದಿಗೆ ನ್ಯಾಯಾಲಯವನ್ನು ಸಂಪರ್ಕಿಸುವ ಮೊದಲು ತಮ್ಮ ಕಾನೂನು ಕೌಶಲ್ಯಗಳನ್ನು ಬಲಪಡಿಸಲು ಸಮಯ ಮತ್ತು ಪರಿಶ್ರಮವನ್ನು ಮೀಸಲಿಡುವಂತೆ ಯುವ ವಕೀಲರಿಗೆ ಸಿಜೆಐ ಸೂರ್ಯಕಾಂತ್ ಅವರು ಸಲಹೆ ನೀಡಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂಬುದು ಜನರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ರೂಪಿಸಲಾದ ಅತ್ಯಂತ ಶಕ್ತಿಯುತ ಸಂವಿಧಾನಾತ್ಮಕ ವ್ಯವಸ್ಥೆಯಾಗಿದೆ. ಆದರೆ ಅದನ್ನು ಬಳಸುವ ಮೊದಲು ಸಮಗ್ರ ಸಿದ್ಧತೆ, ಪರಿಪಕ್ವತೆ ಮತ್ತು ದೃಢವಾದ ಕಾನೂನು ಅಭ್ಯಾಸದ ಪೈಪೋಟಿ ಅಗತ್ಯವೆಂಬ ಮಹತ್ತರ ಜವಾಬ್ದಾರಿಯೂ ಅದರೊಂದಿಗೆ ಸೇರಿಕೊಂಡಿದೆ ಎಂದು ನ್ಯಾಯಪೀಠವು ಮತ್ತೆ ಒತ್ತಿ ಹೇಳಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.