ಸುಪ್ರೀಂ ಮೆಟ್ಟಿಲೇರಿದ ನಟಿ ತ್ವಿಶಾ ಶರ್ಮಾ ಕೇಸ್ : ತನಿಖೆ ಸಿಬಿಐಗೆ ಬಹುತೇಕ ಖಚಿತ..?
ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಮಧ್ಯಪ್ರದೇಶ ಮೂಲದ ನಟಿ, ಮಾಡೆಲ್ ತ್ವಿಶಾ ಶರ್ಮಾ ಸಾವಿನ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆ ಜವಾಬ್ದಾರಿಯನ್ನು ಸಿಬಿಐಗೆ ನೀಡುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಅನುಮಾನಾಸ್ಪದ ಸಾವಿಗೀಡಾದ ನಟಿ ತ್ವಿಶಾ ಶರ್ಮಾ ಪ್ರಕರಣದ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ .ಎಂ. ಪಾಂಚೋಲಿ ಅವರ ನ್ಯಾಯಪೀಠವು ಈ ಪ್ರಕರಣದಲ್ಲಿ ಸ್ವತಂತ್ರ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಹೇಳಿದೆ.
ಸತ್ತು ಹೋದ ಮಗಳಿಗಿಂತ ವಿಚ್ಛೇದಿತ ಮಗಳೇ ವಾಸಿ!
ನಟಿ ತ್ವಿಶಾ ಶರ್ಮಾ ಪರ ವಾದ ಮಂಡಿಸುವಾಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿಚ್ಛೇದಿತ ಮಗಳು ಸತ್ತ ಮಗಳಿಗಿಂತ ಉತ್ತಮ ಎಂದು ವಾದ ಆರಂಭಿಸಿದರು. ತ್ವಿಶಾ ಶರ್ಮಾ ಪಾಲಕರು ತಮ್ಮ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ರಾಜ್ಯ ಸರ್ಕಾರ ಮಾಡಿರುವ ಶಿಫಾರಸ್ಸನ್ನು ನ್ಯಾಯಪೀಠದ ಮುಂದಿಟ್ಟರು.
ಇದೇ ವೇಳೆ ಮಾಧ್ಯಮದವರ ಮುಂದೆ ತ್ವಿಶಾ ಶರ್ಮಾಳ ಪಾಲಕರು ಮನಸೋ ಇಚ್ಛೆ ಹೇಳಿಕೆಯನ್ನು ಕೊಡಬಾರದು. ಇದು ತನಿಖೆ ವೇಳೆ ಗಂಭೀರ ಪರಿಣಾಮ ಬೀರಲು ಕಾರಣವಾಗುತ್ತದೆ ಎಂದು ನ್ಯಾಯಪೀಠವು ಖಡಕ್ ಸೂಚನೆ ನೀಡಿದೆ. ಹಾಗೆಯೇ ಮಾಧ್ಯಮದವರಿಗೆ ಸಹ ಪ್ರಕರಣದ ಸಾಕ್ಷಿಗಳ ಹೇಳಿಕೆಗಳನ್ನು ವೀಕ್ಷಣೆ ಉದ್ದೇಶಕ್ಕಾಗಿ ಸೆರೆಹಿಡಿಯದಂತೆ ತಾಕೀತು ಮಾಡಿದೆ.
ತ್ವಿಶಾ ಶರ್ಮಾ ಪ್ರಕರಣ ವಿವರ ಹೀಗಿದೆ..?
ಕಳೆದ ಮೇ 12 ರಂದು ಭೋಪಾಲ್ ನ ಕತಾರಾ ಹಿಲ್ಸ್ ನಲ್ಲಿರುವ ತನ್ನ ಪತಿಯ ಮನೆಯಲ್ಲಿ ತ್ವಿಶಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ಮರುದಿನವೇ ಅಂದರೆ ಮೇ 13 ರಂದು ಮೊದಲ ಮರಣೋತ್ತರ ಪರೀಕ್ಷೆ ನಡೆದಿತ್ತು. ಆದರೆ, ಈ ಮೊದಲ ವರದಿಯಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಹೊರಬಂದಿವೆ. ತ್ವಿಶಾ ಕುತ್ತಿಗೆಯ ಮೇಲೆ ಎರಡು ಗಂಭೀರವಾದ ಗುರುತುಗಳಿದ್ದವು. ಅಷ್ಟೇ ಅಲ್ಲದೆ ಅವರ ಕೈಗಳು, ಮುಂಗೈ ಮತ್ತು ಬೆರಳುಗಳ ಮೇಲೆಯೂ ಗಾಯದ ಕಲೆಗಳು ಪತ್ತೆಯಾಗಿದ್ದವು. ಯಾರೋ ಅವರ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದರು.
ಅಷ್ಟೇ ಅಲ್ಲದೆ ತ್ವಿಶಾಳ ಪತಿ ಹಾಗೂ ಅತ್ತೆ (ಗಂಡನ ತಾಯಿ) ತನ್ನ ಮಗಳಿಗೆ ವರದಕ್ಷಿಣೆ ಸಂಬಂಧ ನಿರಂತರ ಕಿರುಕುಳ ನೀಡುತ್ತಿದ್ದರು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯವಳಲ್ಲ. ನಮ್ಮ ಮಗಳ ಕೊಲೆ ನಡೆದ ಬಗ್ಗೆ ಅನುಮಾನವಿದೆ ಎನ್ನುವುದು ತ್ವಿಶಾಳ ಪಾಲಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
