ಮೂರನೇ ವ್ಯಕ್ತಿ ದೂರು ಆಧರಿಸಿ ಜಾತಿ ಪ್ರಮಾಣಪತ್ರ ರದ್ದುಪಡಿಸುವ ಅಧಿಕಾರವಿಲ್ಲ- ಹೈಕೋರ್ಟ್
ಬೆಂಗಳೂರು: ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಮೂರನೇ ವ್ಯಕ್ತಿಯ ಅಥವಾ ಅಪರಿಚಿತರ ದೂರು ಆಧರಿಸಿ ಯಾವುದೇ ವ್ಯಕ್ತಿಯ ಜಾತಿ ಪ್ರಮಾಣಪತ್ರ ರದ್ದುಪಡಿಸುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಚಿಕ್ಕೇನಹಳ್ಳಿ ಬೈರಯ್ಯ (58) ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಅರ್ಜಿದಾರರ ಪರ ಹೈಕೋರ್ಟ್ ವಕೀಲ ಪ್ರವೀಣ್ ಕುಮಾರ್ ರಾಯಕೋಟೆ ಅವರ ವಾದ ಮನ್ನಿಸಿತು. ಹಾಗೆಯೇ ಬೈರಯ್ಯ ಅವರ ಜಾತಿ ಪ್ರಮಾಣಪತ್ರ ರದ್ದುಪಡಿಸಿ ರಾಮನಗರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ) 2021ರ ಜುಲೈ 15ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ತೀರ್ಪು ನೀಡಿತು.
“ಯಾವುದೇ ಮೂರನೇ ವ್ಯಕ್ತಿಯ ದೂರು ಆಧರಿಸಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ (ನೇಮಕಾತಿ ಹಾಗೂ ಇತರೆ ವಿಷಯಕ್ಕಾಗಿ ಮೀಸಲಾತಿ) ಕಾಯ್ದೆ- 1990ರ ಕಲಂ 4ಎ ಅಡಿ ತಹಶೀಲ್ದಾರ್ ವಿತರಿಸುವ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸುವ ಅಧಿಕಾರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಇಲ್ಲ. ಆದರೆ, ”ಕಾಯ್ದೆಯ ಕಲಂ 4ಎಫ್ ಅಡಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬಹುದು” ಎಂದು ವಿವರಿಸಿದೆ.
1977ರಲ್ಲಿ ಬೈರಯ್ಯಗೆ ಜಾತಿ ಪ್ರಮಾಣ ಪತ್ರ ವಿತರಣೆ
1977ರ ಜೂನ್ 8ರಲ್ಲಿ ಬೈರಯ್ಯ ಪರಿಶಿಷ್ಟ ಪಂಗಡಕ್ಕೆ ಸೇರಿದ “ಜೇನು ಕುರುಬ” (ಎಸ್ಟಿ) ಎಂದು ಸ್ಥಳೀಯ ತಹಶೀಲ್ದಾರ್ ಜಾತಿ ಪ್ರಮಾಣಪತ್ರ ವಿತರಿಸಿದ್ದರು. ಇದಕ್ಕೆ ಕೊಳ್ಳೆಗಾಲದ “ಅತಾರ್ಕ್ಯ” ಕನ್ನಡ ಪಾಕ್ಷಿಕ ಕ್ರಾಂತಿಕಾರಿ ಸುದ್ದಿ ಪತ್ರಿಕೆ ಪ್ರಧಾನ ಸಂಪಾದಕ ಬಿ.ಶಿವರಾಜ್ ಎಂಬುವವರು “ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಅಕ್ರಮ ನಡೆದಿದೆ” ಎಂದು ಆರೋಪಿಸಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಘಟಕಕ್ಕೆ ದೂರು ಸಲ್ಲಿಸಿದ್ದರು.
ಈ ದೂರು ವಿಚಾರಣೆ ನಡೆಸಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಘಟಕ ವರದಿ ಸಲ್ಲಿಸಿತ್ತು. ಈ ವರದಿ ಪರಿಶೀಲಿಸಿದ್ದ ರಾಮನಗರ ಡಿಸಿ ವಿಸಿ ಬೈರಯ್ಯನವರ ಜಾತಿ ಪ್ರಮಾಣ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಬೈರಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಡಿಸಿವಿಸಿ ಪರ ಹಿರಿಯ ವಕೀಲ ಸಿ.ಜಗದೀಶ್ ವಾದ ಮಂಡಿಸಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
