ಬಂಧನ ಕಾನೂನು ಬಾಹಿರವಾಗಿದ್ರೆ ರಕ್ತದ ಮಾದರಿ ಸಂಗ್ರಹ, ವೈದ್ಯಕೀಯ ಪರೀಕ್ಷೆ ರದ್ದು-ಹೈಕೋರ್ಟ್ ಸ್ಪಷ್ಟ ತೀರ್ಪು
ಬೆಂಗಳೂರು: ಬಂಧನವು ಕಾನೂನು ಬಾಹಿರವಾಗಿದ್ದರೇ ರಕ್ತದ ಮಾದರಿಯನ್ನುಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಹಾಗೆಯೇ ಇದರ ಆಧಾರದ ಮೇಲೆ ನಡೆಸಿದ ವೈದ್ಯಕೀಯ ಪರೀಕ್ಷೆ ಕೂಡ ರದ್ದಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತನ್ನ ವಿರುದ್ಧ ಬೆಂಗಳೂರು ಗ್ರಾಮಂತರ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ವಿಶೇಷ ಕೋರ್ಟ್ನಲ್ಲಿರುವ ಪ್ರಕರಣದ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಕೆ.ಆರ್.ಪುರದ ಎಮನ್ ಅಬ್ಬಾಸ್ ಟೋಪಿವಾಲ (28) ಎಂಬವವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ರಿಟ್ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ, ‘ಕಾನೂನು ಬದ್ಧವಾಗಿ ಬಂಧನ ಮಾಡದ ಹೊರತು ಯಾವುದೇ ವ್ಯಕ್ತಿಯ ರಕ್ತದ ಮಾದರಿಯನ್ನು ಸಂಗ್ರಹಿಸಲು ಅವಕಾಶವಿಲ್ಲ. ಒಂದು ವೇಳೆ ವ್ಯಕ್ತಿಯ ಬಂಧನಕ್ಕೂ ಮುನ್ನ ಸಂಗ್ರಹಿಸಿದ್ದರೆ ಅಂತಹ ರಕ್ತದ ಮಾದರಿಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿತು.
ಪ್ರಕರಣದಲ್ಲಿ ಆರೋಪಿ ಮಾದಕ ವಸ್ತು ಸೇವನೆ ಮಾಡಿರುವುದಾಗಿ ಆರೋಪಿಸಲಾಗಿದೆ. ಆದರೆ, ರಕ್ತದ ಮಾದರಿ ಸಂಗ್ರಹ ಕಾನೂನು ಬಾಹಿರವಾಗಿದೆ. ಇದರ ಆಧಾರದಲ್ಲಿ ಸಿದ್ಧವಾದ ವೈದ್ಯಕೀಯ ಮತ್ತು ಫೋರೆನ್ಸಿಕ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿಗಳು ರದ್ದಾಗಲಿವೆ. ಆದ್ದರಿಂದ, ಇಂತಹ ಸಾಕ್ಷ್ಯಗಳ ಆಧಾರದಲ್ಲಿ ಪ್ರಾಸಿಕೂಷನ್ ಪ್ರಕ್ರಿಯೆ ಮುಂದುವರೆಯುವುದು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.
ಆರೋಪಿಯ ಬಂಧನ ಕಾನೂನು ಬಾಹಿರವಾಗಿದ್ದರೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ-2023ರ ಕಲಂ 51ರ ಅಡಿಯಲ್ಲಿ ನಡೆಸಲಾಗುವ ಯಾವುದೇ ವೈದ್ಯಕೀಯ ಪರೀಕ್ಷೆ, ರಕ್ತದ ಮಾದರಿಗಳನ್ನು ಹೊರತೆಗೆಯುವುದು ದೋಷಪೂರಿತವಾಗುತ್ತದೆ. ಕಾನೂನುಬದ್ಧ ಬಂಧನಕ್ಕೆ ಅಗತ್ಯವಾದ ಕ್ರಮಗಳು, ವಿಶೇಷವಾಗಿ ಬಂಧನದ ಕಾರಣಗಳನ್ನು ತಿಳಿಸುವುದು ಕಡ್ಡಾಯ. ಆದ್ದರಿಂದ, ಈ ಪ್ರಕರಣದಲ್ಲಿ ಅರ್ಜಿದಾರರ ಬಂಧನ ಕಾನೂನು ಬಾಹಿರವಾಗಿದೆ ಮತ್ತು ಅವರ ಮೇಲೆ ನಡೆಸಿರುವ ವೈದ್ಯಕೀಯ ಪರೀಕ್ಷೆ ರದ್ದಾಗಲಿದೆ’ ಎಂದು ನ್ಯಾಯಪೀಠ ತಿಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
