ಚುನಾವಣಾ ಆಯೋಗದ ‘SIR’ ಪ್ರಕ್ರಿಯೆ: ಕಾನೂನುಬದ್ಧತೆ ಎತ್ತಿ ಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಸುಪ್ರೀಂ
ನವದೆಹಲಿ: ದೇಶದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗವು ಅಕ್ರಮ ಮತದಾರರನ್ನು ಪಟ್ಟಿಯಿಂದ ಹೊರಹಾಕಲು ಕೈಗೊಂಡಿರುವ ಅತ್ಯಂತ ಕಟ್ಟುನಿಟ್ಟಿನ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಚುನಾವಣಾ ಆಯೋಗವು ತನ್ನ ವ್ಯಾಪ್ತಿಯನ್ನು ಮೀರಿ ಈ ಕಠಿಣ ಕ್ರಮ ಕೈಗೊಂಡಿದೆ ಎಂದು ಸಲ್ಲಿಕೆಯಾಗಿದ್ದ ಎಲ್ಲಾ ಸರಣಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ನೇತೃತ್ವದ ದ್ವಿಸದಸ್ಯ ಪೀಠವು, ಎಸ್ ಐಆರ್ ಪ್ರಕ್ರಿಯೆಯು ಸಂವಿಧಾನದ ಪರಿಧಿಯಲ್ಲೇ ನಡೆದಿದೆ. ಮತದಾರರ ಪಟ್ಟಿಯನ್ನು ಆಳವಾಗಿ ಪರಿಷ್ಕರಿಸುವುದು ಮುಕ್ತ ಮತ್ತು ಪಾರದರ್ಶಕ ಚುನಾವಣೆಯ ಸಾಂವಿಧಾನಿಕ ಆಶಯದ ಭಾಗವಾಗಿದೆ. ಚುನಾವಣಾ ಆಯೋಗದ ಎಸ್ ಐಆರ್ ಪ್ರಕ್ರಿಯೆ ಸಂಪೂರ್ಣ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.
ದೇಶದ ಪೌರತ್ವದ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುವಂತಹ ಅಥವಾ ನಕಲಿ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಲು ಚುನಾವಣಾ ಆಯೋಗಕ್ಕೆ ಸಂಪೂರ್ಣ ಹಕ್ಕದೆ. ಎಸ್ ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ನೋಟಿಸ್ ನೀಡುವುದು, ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದು, ಅನುಮಾನಾಸ್ಪದ ಪ್ರಕರಣಗಳ ವೈಯಕ್ತಿಕ ತನಿಖೆ ನಡೆಸುವುದು ಮತ್ತು ಮೇಲ್ಮನವಿ ಸಲ್ಲಿಸಲು ಮುಕ್ತ ಅವಕಾಶ ನೀಡುವುದು. ಈ ಎಲ್ಲಾ ಕ್ರಮಗಳು ನ್ಯಾಯಸಮ್ಮತತೆಯ ನಿಯಮಗಳನ್ನು ಪೂರೈಸುತ್ತವೆ. ಹೀಗಾಗಿ ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಿಲ್ಲ ಎಂದು ನ್ಯಾಯಪೀಠವು ತಿಳಿಸಿದೆ. ಅಲ್ಲದೆ, ತಪಾಸಣೆಯ ಸಮಯದಲ್ಲಿ ಮತದಾರರಿಂದ ದಾಖಲೆಗಳನ್ನು ಕೇಳಿದ ತಕ್ಷಣವೇ ಅವರನ್ನು ದೇಶದ ನಾಗರಿಕರಲ್ಲ ಎಂದು ಬಿಂಬಿಸಲಾಗುತ್ತಿದೆ ಎಂಬ ಅರ್ಜಿದಾರರ ಆರೋಪವನ್ನು ನ್ಯಾಯಪೀಠ ತಳ್ಳಿಹಾಕಿದೆ.
ದೇಶದ ಸಂವಿಧಾನದ ವಿಧಿ 324 ಮತ್ತು 1950 ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 21(3) ರ ಅಡಿಯಲ್ಲಿ ಯಾವುದೇ ಸಮಯದಲ್ಲಿ ವಿಶೇಷ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗಕ್ಕೆ ಸಂಪೂರ್ಣ ಶಾಸನಬದ್ಧ ಅಧಿಕಾರವಿದೆ. ಅಲ್ಲದೆ, ಸಾಮಾನ್ಯ ಮತದಾರರ ಪಟ್ಟಿ ಪರಿಷ್ಕರಣೆಗಿಂತ ಇದು ಭಿನ್ನವಾಗಿದೆ ಎಂದ ಮಾತ್ರಕ್ಕೆ ಇದನ್ನು ಅಕ್ರಮ ಅಥವಾ ಕಾನೂನುಬಾಹಿರ ಎಂದು ಕರೆಯಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯು ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ, ಬದಲಿಗೆ ಸಂವಿಧಾನದ ಆಶಯಕ್ಕೆ ಜೀವ ತುಂಬುತ್ತದೆ ಆಯೋಗವು ತನ್ನ ಶಾಸನಬದ್ಧ ಅಧಿಕಾರವನ್ನು ಮೀರಿ ಕಾರ್ಯನಿರ್ವಹಿಸಿದೆ ಎಂಬ ಅರ್ಜಿದಾರರ ವಾದ ಸಂಪೂರ್ಣ ತಪ್ಪು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠವು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಸುಪ್ರೀಂ ಕೋರ್ಟ್ ನ ಈ ತೀರ್ಪು ದೇಶದಾದ್ಯಂತ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಾಗಳನ್ನು ವೋಟರ್ ಲಿಸ್ಟ್ ನಿಂದ ಹೊರಹಾಕಲು ಹೋರಾಡುತ್ತಿದ್ದ ಭದ್ರತಾ ಸಂಸ್ಥೆಗಳಿಗೆ ಹಾಗೂ ಚುನಾವಣಾ ಆಯೋಗಕ್ಕೆ ಆನೆಬಲ ತಂದಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
