30/05/2026

Law Guide Kannada

Online Guide

ಮೋಟಾರು ವಾಹನ ಕಾಯ್ದೆಯಡಿ ಪರಿಹಾರದಿಂದ ಗುಂಪು ವಿಮಾ ಯೋಜನೆ ಮೊತ್ತ ಕಡಿತ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಮೋಟಾರು ವಾಹನ ಕಾಯ್ದೆಯಡಿ ಬರುವ ಪರಿಹಾರದಿಂದ ಗುಂಪು ವಿಮಾ ಯೋಜನೆ ಮೊತ್ತವನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮೃತರ ಮರಣದ ನಂತರ ಗುಂಪು ವಿಮಾ ಯೋಜನೆಗಳ ಅಡಿಯಲ್ಲಿ ಕುಟುಂಬದವರು ಪಡೆದ ಮೊತ್ತವನ್ನು ಮೋಟಾರು ವಾಹನ ಕಾಯ್ದೆಯ ಪರಿಹಾರದಿಂದ ಕಡಿತಗೊಳಿಸಲು ಅನುಮತಿಸದ ಕರ್ನಾಟಕ ಹೈಕೋರ್ಟ್ ಗಳ ತೀರ್ಪಿನ ವಿರುದ್ಧ ಕೆಎಸ್ಆರ್ಟಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಈ ವಿಶೇಷ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠವು, ಉದ್ಯೋಗದಾತರು ಒದಗಿಸುವ ಗುಂಪು ವಿಮಾ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಉದ್ಯೋಗಿಗಳ ಕುಟುಂಬದವರು ಪಡೆದ ಮೊತ್ತವನ್ನು 1988ರ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ನೀಡಲಾಗುವ ಪರಿಹಾರದಿಂದ ಕಡಿತಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮೃತರ ಕುಟುಂಬದವರು ಎರಡೂ ಕಡೆಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ವಿಚಾರಣೆ ವೇಳೆ ಕೆಎಸ್ ಆರ್ಟಿಸಿ ವಾದವ ಮುಂದಿಟ್ಟಿತು. ಆದರೆ ಈ ವಾದ ತಿರಸ್ಕರಿಸಿದ ನ್ಯಾಯಪೀಠವು, ‘ಉದ್ಯೋಗದಾತರು ಒದಗಿಸುವ ವಿಮೆಯು ಸ್ವತಂತ್ರ ಒಪ್ಪಂದದಿಂದ ರೂಪುಗೊಂಡಿರುತ್ತದೆ. ಇದು ಮೋಟಾರು ವಾಹನ ಕಾಯ್ದೆಯ ಶಾಸನಬದ್ಧ ಪರಿಹಾರದೊಂದಿಗೆ ಸಂಬಂಧ ಹೊಂದಿರುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ಮೃತರ ಕುಟುಂಬವು ಪಡೆದ ಗುಂಪು ವಿಮಾ ಮೊತ್ತವನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕಡಿಮೆ ಮಾಡಿ ಬೆಂಗಳೂರಿನ ಮೋಟಾರು ಅಪಘಾತ ಕ್ಷೇಮುಗಳ ನ್ಯಾಯಮಂಡಳಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಕೋರ್ಟ್ ಗೆ ವಿಶೇಷ ಮೇಲ್ಮನವಿ ಸಲ್ಲಿಸಲಾಗಿತ್ತು.

2018ರಲ್ಲಿ ಚಿತ್ತೂರಿನಲ್ಲಿ ಕೆಎಸ್ ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಪಿ. ವಿಶ್ವೇಶ್ವರ್ ಎಂಬವರು ಮೃತಪಟ್ಟಿದ್ದರು. 34 ವರ್ಷದ ಅವರು ಬೆಂಗಳೂರಿನ ಆಕ್ಸೆಂಚರ್ ನಲ್ಲಿ ಉದ್ಯೋಗಿಯಾಗಿದ್ದರು. ಆಗ ಅವರ ವೇತನ 70 ಸಾವಿರ ರೂ. ಇತ್ತು. ಕೆಎಸ್ ಆರ್ಟಿಸಿ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಕೋರಿ ಕುಟುಂಬದವರು ನ್ಯಾಯಮಂಡಳಿ ಮೆಟ್ಟಿಲೇರಿದ್ದರು. ನ್ಯಾಯಮಂಡಳಿಯು 69 ಲಕ್ಷ ರೂ. ಪರಿಹಾರ ನಿಗದಿಪಡಿಸಿತ್ತು. ಆದರೆ, ಕುಟುಂಬದವರು ಪಡೆದ ಗುಂಪು ವಿಮಾ ಮೊತ್ತ 35.48 ಲಕ್ಷ ರೂ.ವನ್ನು ಕಡಿತಗೊಳಿಸಿ 33.59 ಲಕ್ಷವನ್ನು ವಾರ್ಷಿಕ ಶೇ6 ಬಡ್ಡಿಯೊಂದಿಗೆ ನೀಡಲು ಆದೇಶಿಸಿತ್ತು.

ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಕೆಎಸ್ ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಖಾಸಗಿ ಕಂಪನಿ ಉದ್ಯೋಗಿ ಸೆಲೆಸ್ಟಿನ್ ಡಿಸೋಜ ಮೃತಪಟ್ಟಿದ್ದರು. ಆಗ ಅವರಿಗೆ ತಿಂಗಳಿಗೆ 47 ಸಾವಿರ ರೂ. ವೇತನ ಇತ್ತು. ನ್ಯಾಯಮಂಡಳಿಯು 63.04 ರೂ. ಲಕ್ಷ ಪರಿಹಾರ ನಿಗದಿಪಡಿಸಿತ್ತು. ಆದರೆ, ಉದ್ಯೋಗದಾತರ ಗುಂಪು ವಿಮಾ ಯೋಜನೆಯಲ್ಲಿ ಕುಟುಂಬದವರು ಪಡೆದ ₹10 ಲಕ್ಷವನ್ನು ಕಡಿತಗೊಳಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.