23/04/2026

Law Guide Kannada

Online Guide

LLB ಪದವಿ ಓದಲು ಅವಕಾಶ ಕೋರಿ ಸುಪ್ರೀಂ ಮೆಟ್ಟಿಲೇರಿದ ನ್ಯಾಯಾಂಗ ಸಿಬ್ಬಂದಿ

ನವದೆಹಲಿ: ಛತ್ತೀಸ್ ಗಢ ನ್ಯಾಯಾಲಯ ಸಿಬ್ಬಂದಿಯೊಬ್ಬರು ನಿಯಮಿತ ವಿದ್ಯಾರ್ಥಿಯಾಗಿ ಎಲ್ಎಲ್. ಬಿ ಓದಲು ಅವಕಾಶ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ
. ಛತ್ತೀಸ್ಗಢ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿಬ್ಬಂದಿ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ ವಿಭಾಗೀಯ ನ್ಯಾಯಪೀಠವು ನೋಟಿಸ್ ಜಾರಿ ಮಾಡಿದೆ.

ಪರೀಕ್ಷಾರ್ಥ ಅವಧಿಯ (probation) ಉದ್ಯೋಗಿಗೆ ನಿಯಮಿತ ವಿದ್ಯಾರ್ಥಿಯಾಗಿ ಎಲ್ಎಲ್.ಬಿ ಮೂರನೇ ವರ್ಷದ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಇದಕ್ಕೆ ಅನುಮತಿ ನೀಡಿದರೆ ಆಡಳಿತ ಶಿಸ್ತು, ಕಚೇರಿ ಕಾರ್ಯನಿರ್ವಹಣೆ ಮತ್ತು ಕಾನೂನು ಬದ್ಧ ನಿಯಮಗಳ ಮೇಲೆ ಪರಿಣಾಮ ಬೀಳುತ್ತದೆ ಎಂದು ಚತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯ ಸಿಬ್ಬಂದಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿವರ
ಸೆಪ್ಟೆಂಬರ್ 2022ರಲ್ಲಿ, ಒಬ್ಬ ಉದ್ಯೋಗಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಹಾಯಕ ಗ್ರೇಡ್-III ಹುದ್ದೆಗೆ ಮೂರು ವರ್ಷಗಳ ಪರೀಕ್ಷಾ ಅವಧಿಗೆ ನೇಮಕ ಮಾಡಲಾಗಿತ್ತು. ನೇಮಕಾತಿ ನಿಯಮದ 7ನೇ ಷರತ್ತಿನ ಪ್ರಕಾರ, ಮೊದಲ ವರ್ಷದೊಳಗೆ ಉನ್ನತ ವಿದ್ಯಾಭ್ಯಾಸ ಮುಂದುವರಿಸಲು ಕಚೇರಿ ಮುಖ್ಯಸ್ಥರ ಪೂರ್ವಾನುಮತಿ ಅಗತ್ಯ. ಉದ್ಯೋಗಿಯು ಮೊದಲ ಹಾಗೂ ಎರಡನೇ ವರ್ಷದ ಎಲ್ಎಲ್.ಬಿ ಓದಲು ಅನುಮತಿ ಪಡೆದಿದ್ದರು ಆದರೆ. 06.10.2023ರಿಂದ ಜಾರಿಗೆ ಬಂದಿರುವ “ಛತ್ತೀಸ್ಗಢ ಜಿಲ್ಲಾ ನ್ಯಾಯಾಂಗ ಸ್ಥಾಪನೆ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2023” ರ ನಿಯಮ 11 ರ ಪ್ರಕಾರ ಉದ್ಯೋಗಿಗಳು ಯಾವುದೇ ವಿದ್ಯಾಭ್ಯಾಸವನ್ನು ನಿಯಮಿತ (ರೆಗ್ಯೂಲರ್) ವಿದ್ಯಾರ್ಥಿಯಾಗಿ ಮುಂದುವರಿಸಲು ಅವಕಾಶವಿಲ್ಲ. ಆದರೂ ಅನುಮತಿ ಪಡೆದು ಖಾಸಗಿ ಅಥವಾ ಅಂಚೆ ತೆರಪಿನ (correspondence) ಮೂಲಕ ಓದಲು ಅವಕಾಶವಿದೆ. ಆದುದರಿಂದ, ಮೂರನೇ ವರ್ಷದ ಎಲ್ಎಲ್.ಬಿ ಅನ್ನು ನಿಯಮಿತವಾಗಿ ಓದಲು ಅನುಮತಿ ಕೇಳಿದಾಗ ನೇಮಕಾತಿ ಪ್ರಾಧಿಕಾರ/ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅರ್ಜಿಯನ್ನು ತಿರಸ್ಕರಿಸಿದ್ದರು
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ನ್ಯಾಯಾಂಗ ಸಿಬ್ಬಂದಿ ಛತ್ತೀಸ್ ಗಢ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಈ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ನಿಯಮ 47ರ “ರದ್ದು ಮತ್ತು ಉಳಿಕೆ (repeal and saving)” ಪ್ರಾವಧಾನವನ್ನು ಉಲ್ಲೇಖಿಸಿ, 2023ರ ನಿಯಮಗಳು ಅನ್ವಯಿಸುವುದಿಲ್ಲ ಎಂದು ಹೇಳಿ, ಉದ್ಯೋಗಿಗೆ ಮೂರನೇ ವರ್ಷಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಆದೇಶಿಸಿತು.

ಆದರೆ, ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ರವೀಂದ್ರ ಕುಮಾರ್ ಅಗರ್ವಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಿ ತೀರ್ಪು ಪ್ರಕಟಿಸಿತ್ತು.

ಇದನ್ನ ಪ್ರಶ್ನಿಸಿ ನ್ಯಾಯಾಂಗ ಸಿಬ್ಬಂದಿ ಇದೀಗ ಸುಪ್ರೀಂ ಕೋರ್ಟ್ ಕದ ತಟ್ಟಿದ್ದು, ನ್ಯಾಯಾಲಯವು ಸಂಬಂಧಿತ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.