SIR ಬಗ್ಗೆ ನ್ಯಾ. ಭುಯಾನ್ ಹೇಳಿಕೆಗೆ ನಿವೃತ್ತ CJI ಗವಾಯಿ ತೀವ್ರ ಆಕ್ಷೇಪ
ನವದೆಹಲಿ: ದೇಶದಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿದ್ದು ಈ ಎಸ್ ಐಆರ್ ಗೆ ಸಂಬಂಧಿಸಿದ ಅರ್ಜಿಗಳು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಇದೇ ವೇಳೆ ಎಸ್ ಐಆರ್ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರ ನಡೆಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಿವೃತ್ತ ಸಿಜೆಐ ಬಿ.ಆರ್. ಗವಾಯಿ, ಎಸ್ಐಆರ್ ಕುರಿತು ಅರ್ಜಿಗಳು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿವೆ. ಆ ಬಗ್ಗೆ ಹಾಲಿ ನ್ಯಾಯಮೂರ್ತಿಯೊಬ್ಬರು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ‘ನ್ಯಾಯಾಂಗ ಶಿಷ್ಟಾಚಾರ’ಕ್ಕೆ ವಿರುದ್ಧ ಎಂದು ಆಕ್ಷೇಪಿಸಿದ್ದಾರೆ.
ಭುಯಾನ್ ಅವರ ಹೇಳಿಕೆಯನ್ನು ಪ್ರಶ್ನಿಸಿರುವ ನಿವೃತ್ತ ನ್ಯಾಯಮೂರ್ತಿಗಳಾದ ಎಸ್.ಎನ್. ಧಿಂಗ್ರಾ ಮತ್ತು ಆರ್.ಎಸ್. ಸೋಧಿ ಅವರು, ಎಸ್ಐಆರ್ ಅನ್ನು ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಕ್ರಿಯೆ ಎಂದು ಕರೆಯುವುದು ಸರಿಯಲ್ಲ. ಮತದಾನದ ಹಕ್ಕು ಕಾನೂನು ನಿಗದಿಪಡಿಸಿರುವ ಅರ್ಹತೆಗಳ ಆಧಾರದಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ನ್ಯಾ. ಭುಯಾನ್ ನೀಡಿದ್ದ ಹೇಳಿಕೆಯಿದು
ನಾಲ್ಕಾರ್ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನ್ಯಾ. ಭುಯಾನ್ ಅವರು, ‘ದೇಶದ ಲಕ್ಷಾಂತರ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಕ್ರಿಯೆಯು ಸಾಂವಿಧಾನಿಕ ಹಕ್ಕಿನ ನಿರಾಕರಣೆಯಾಗಿದೆ. ಭಾರತದ ಸಂವಿಧಾನವು ಎರಡು ವರ್ಗದ ನಾಗರಿಕರನ್ನು ಸೃಷ್ಟಿಸಲು ಅವಕಾಶ ನೀಡುವುದಿಲ್ಲ. ಒಂದು ವರ್ಗದ ನಾಗರಿಕರಿಗೆ ಮತದಾನದ ಹಕ್ಕು ನೀಡಿ ಇನ್ನೊಂದು ವರ್ಗದ ನಾಗರಿಕರಿಗೆ ಮತದಾನದ ಹಕ್ಕು ನಿರಾಕರಿಸುವಂತೆ ಇಲ್ಲ. ದೇಶದ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವಿಕೆಗೆ ಕಾರಣವಾಗುವ ಯಾವುದೇ ಪ್ರಕ್ರಿಯೆಯು ಸಂವಿಧಾನದ 326 ಮತ್ತು 14ನೇ ವಿಧಿಗಳ ಉಲ್ಲಂಘನೆಯಾಗುತ್ತದೆ’ ಎಂದು ಹೇಳಿದ್ದರು.
ಇನ್ನು ಮತದಾರರ ಪಟ್ಟಿಯ ಎಸ್ ಐಆರ್ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಪ್ರಸ್ತುತ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ಈ ವೇಳೆ ನ್ಯಾ. ಭುಯಾನ್ ಹೇಳಿಕೆ ನೀಡಿರುವುದಕ್ಕೆ ಆಕ್ಷೇಪಗಳು ಕೇಳಿ ಬಂದಿವೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
