ಪೊಲೀಸ್ ಅಧಿಕಾರಿಗಳ ವಿರುದ್ಧ FIR: ಪೂರ್ವಾನುಮತಿ ಅಗತ್ಯವಿಲ್ಲ- ಸುಪ್ರೀಂ ಕೋರ್ಟ್
ನವದೆಹಲಿ: ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಲು ಸಿಆರ್ ಪಿಸಿ ಸೆಕ್ಷನ್ 197ರ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪೊಲೀಸ್ ಅಧಿಕಾರಿಗಳ ವಿರುದ್ದದ ಎಫ್ ಐಆರ್ ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠವು, ಸಾರ್ವಜನಿಕ ಸೇವಕರು ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎಸಗಿದ್ದಾರೆ ಎನ್ನಲಾಗುವ ಕೃತ್ಯಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಗತ್ಯವಿರುವ CrPC ಸೆಕ್ಷನ್ 197ರ ಪೂರ್ವಾನುಮತಿ ಈIಖ ದಾಖಲಿಸುವ ಹಂತದಲ್ಲಿ ಅಗತ್ಯವಿಲ್ಲ ಸ್ಪಷ್ಟಪಡಿಸಿದೆ.
ಸೆಕ್ಷನ್ 197ರ ಅಡಿಯಲ್ಲಿ ಅನುಮತಿ ಪಡೆಯುವ ಅಗತ್ಯವು ನ್ಯಾಯಾಲಯವು ಅಪರಾಧದ ಬಗ್ಗೆ cognizance (ಅಪರಾಧವನ್ನು ವಿಚಾರಣೆಗೆ ಪರಿಗಣಿಸುವಿಕೆ) ತೆಗೆದುಕೊಳ್ಳುವ ಹಂತದಲ್ಲಿ ಮಾತ್ರ ಅನ್ವಯಿಸುತ್ತದೆ. FIR ದಾಖಲಿಸುವಂತೆ CrPC ಸೆಕ್ಷನ್ 156(3)ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನೀಡುವ ನಿರ್ದೇಶನವು ಕಾಗ್ನಿಜನ್ಸ್ ತೆಗೆದುಕೊಳ್ಳುವ ಮುನ್ನದ (pre-cognizance) ಹಂತದ ಕ್ರಮವಾಗಿದ್ದು, ಅದು ಅಪರಾಧದ ಕಾಗ್ನಿಜನ್ಸ್ ತೆಗೆದು ಕೊಂಡಂತಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಏನಿದು ಪ್ರಕರಣ
ಅರ್ಜಿದಾರರು ತಮ್ಮ ವ್ಯಾಪಾರ ಸಂಬಂಧಿತ ವಿವಾದಗಳ ಹಿನ್ನೆಲೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪಾರ ಸಹಚರರೊಂದಿಗೆ ಶಾಮೀಲಾಗಿ ತಮ್ಮನ್ನು ಅಕ್ರಮವಾಗಿ ಬಂಧಿಸಿ, ಒತ್ತಡ ಹಾಗೂ ಬಲವಂತದಿಂದ ಕೆಲವು ದಾಖಲೆಗಳಿಗೆ ಸಹಿ ಮಾಡಿಸಿ ತಮ್ಮ ಷೇರುಹಕ್ಕನ್ನು ತ್ಯಜಿಸುವಂತೆ ಮಾಡಿದ್ದರು ಬಂಧನದಲ್ಲಿದ್ದ ಸಂದರ್ಭದಲ್ಲಿ ತಮ್ಮ ಡಿಜಿಟಲ್ ಸಾಧನಗಳಲ್ಲಿಯೂ ಹಸ್ತಕ್ಷೇಪ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಸ್ಥಳೀಯ ಪೊಲೀಸರಿಗೆ ಹಾಗೂ ನಂತರ DGPಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದರು. ಮ್ಯಾಜಿಸ್ಟ್ರೇಟ್ ಅವರು ಸಿಆರ್ ಪಿಸಿ ಸೆಕ್ಷನ್ 156(3)*ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದರು. ಇದನ್ನು ಪ್ರಶ್ನಿಸಿ ಪ್ರತಿವಾದಿಗಳು ಹೈಕೋರ್ಟ್ ಮೊರೆ ಹೋದರು. ಹೈಕೋರ್ಟ್, ಪೊಲೀಸ್ ಅಧಿಕಾರಿಗಳ ವಿರುದ್ಧದ ಆರೋಪಗಳಿಗೆ ಸಿಆರ್ ಪಿಸಿ ಸೆಕ್ಷನ್ 197ರ ಪೂರ್ವಾನುಮತಿ ಅಗತ್ಯವಿದೆ ಹಾಗೂ Priyanka Srivastava ಪ್ರಕರಣದ ಮಾರ್ಗಸೂಚಿಗಳನ್ನು ದೂರುದಾರರು ಪಾಲಿಸಿಲ್ಲ ಎಂಬ ಕಾರಣದಿಂದ ಎಫ್ ಐಆರ್ ಅನ್ನು ರದ್ದುಪಡಿಸಿತು.
ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು, ಸೆಕ್ಷನ್ 156(3)ರ ಅಡಿಯಲ್ಲಿ ಈIಖ ದಾಖಲಿಸುವಂತೆ ನೀಡುವ ಆದೇಶವು pre-cognizance stageನ ಕ್ರಮವಾಗಿದ್ದು, ಅದು ಕಾಗ್ನಿಜನ್ಸ್ ತೆಗೆದುಕೊಳ್ಳುವುದಕ್ಕೆ ಸಮಾನವಲ್ಲ ಎಂದು ಹೇಳಿತು.
ಸೆಕ್ಷನ್ 197ರ ಅನುಮತಿ ಅಗತ್ಯವಾಗುವುದು CrPc ಸೆಕ್ಷನ್ 190ರ ಅಡಿಯಲ್ಲಿ ನ್ಯಾಯಾಲಯವು cognizance ತೆಗೆದುಕೊಳ್ಳುವ ಹಂತದಲ್ಲಿ ಮಾತ್ರ. ಹೀಗಾಗಿ ಎಫ್ ಐಆರ್ ದಾಖಲಿಸುವ ಹಂತದಲ್ಲೇ ಸೆಕ್ಷನ್ 197ರ ಅನುಮತಿ ಪಡೆಯಬೇಕು ಎಂಬ ಹೈಕೋರ್ಟ್ ನಿಲುವನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಹೈಕೋರ್ಟ್ ತೀರ್ಪನ್ನು ರದ್ದು ಪಡಿಸಿ ಮೇಲ್ಮನವಿಗಳನ್ನು ಅಂಗೀಕರಿಸಿತು. ಈಗಾಗಲೇ ಸಲ್ಲಿಸಲಾಗಿದ್ದ ಮುಕ್ತಾಯ ವರದಿಯನ್ನು (final report) ಪುನಃ ತೆರೆಯುವಂತೆ ಮತ್ತು ತನಿಖೆಯನ್ನು ಅದು ಸಲ್ಲಿಸಲ್ಪಟ್ಟ ಹಂತದಿಂದಲೇ ಮುಂದುವರಿಸುವಂತೆ ನಿರ್ದೇಶಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
